ವಾಷಿಂಗ್ಟನ್(ನ.23)‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಕೊರೋನಾ ಸೋಂಕು ತಗುಲಿದ ಸಂದರ್ಭದಲ್ಲಿ ನೀಡಲಾಗಿದ್ದ ರೆಜೆನೆರಾನ್‌ ಕಂಪನಿಯ ‘ಆ್ಯಂಟಿಬಾಡಿ’ (ಪ್ರತಿಕಾಯ) ಔಷಧವನ್ನು ಕೋವಿಡ್‌-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನಾಗಿ ತುರ್ತು ಪರಿಸ್ಥಿತಿಯಲ್ಲಿ ನೀಡಲು ಅಮೆರಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.

ಈ ಔಷಧವು ಕೊರೋನಾದ ಲಘು ಲಕ್ಷಣ ಕಂಡುಬಂದವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಇದು ಸೌಮ್ಯರೋಗ ಲಕ್ಷಣವು ತೀವ್ರ ರೋಗಲಕ್ಷಣಕ್ಕೆ ಪರಿವರ್ತನೆ ಆಗಿ ಆಸ್ಪತ್ರೆಗೆ ದಾಖಲಾಗುವುದನ್ನು ತ್ಪಪಿಸುತ್ತದೆ. ಐವಿ ಮೂಲಕ ಇದನ್ನು ನೀಡಲಾಗುತ್ತದೆ. ಆದರೆ ಇದನ್ನು ಎಲ್ಲರ ಮೇಲೂ ಪ್ರಯೋಗಿಸುವಂತಿಲ್ಲ.

12 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳು ಹಾಗೂ ವಯಸ್ಕರಿಗೆ, ಅದರಲ್ಲೂ ವಿಶೇಷವಾಗಿ 40 ಕೇಜಿಗಿಂತ ಹೆಚ್ಚು ತೂಕ ತೂಗುತ್ತಿರುವ ಹಾಗೂ ಕೊರೋನಾ ಅಪಾಯದಲ್ಲಿರುವ ವ್ಯಕ್ತಿಗಳಿಗೆ ಇದನ್ನು ನೀಡಬಹುದಾಗಿದೆ.