ಅಮೆರಿಕಾದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ; ಸೋಮವಾರ ವಿಶ್ವಸಂಸ್ಥೆಯಲ್ಲಿ ಭಾಷಣ
ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಡ್ ಶೃಂಗಸಭೆ ಮತ್ತು ವಿಶ್ವಸಂಸ್ಥೆ ಸಭೆಯಲ್ಲಿ ಭಾಗವಹಿಸಲು ಮೂರು ದಿನಗಳ ಪ್ರವಾಸಕ್ಕಾಗಿ ಅಮೆರಿಕಕ್ಕೆ ಆಗಮಿಸಿದ್ದಾರೆ. ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ಮೋದಿ ಅವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ವಾಷಿಂಗ್ಟನ್ ಡಿಸಿ: ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ವಿಶ್ವಸಂಸ್ಥೆ ಶೃಂಗದಲ್ಲಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರು 3 ದಿನಗಳ ಭೇಟಿಗಾಗಿ ಭಾರತೀಯ ಕಾಲಮಾನ ಶನಿವಾರ ಸಂಜೆ ಅಮೆರಿಕಕ್ಕೆ ಆಗಮಿಸಿದ್ದಾರೆ. ಫಿಲಡೆಲ್ಫಿಯಾಗೆ ಆಗಮಿಸಿದ ಮೋದಿ ಅವರನ್ನು ಭಾರತೀಯ ಸಮುದಾಯದವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಇದೇ ವೇಳೆ, ತ್ರಿವರ್ಣ ಧ್ವಜ ರಾರಾಜಿಸಿದವು ಹಾಗೂ ಭಾರತ್ ಮಾತಾ ಕೀ ಜೈ ಜಯಘೋಷ ಮೊಳಗಿದವು. ಮೋದಿ ಅವರಿಗೆ ವಿಶಿಷ್ಟ ಕಾಣಿಕೆಗಳನ್ನು ಭಾರತೀಯರು ಸಮರ್ಪಿಸಿದರು. ಫಿಲಡೆಲ್ಫಿಯಾದಿಂದ ಡೆಲವೇರ್‌ನ ವಿಲ್ಮಿಂಗ್ಟನ್ ತೆರಳಿದ ಮೋದಿ, ರಾತ್ರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜತೆ ಮೋದಿ ದ್ವಿಪಕ್ಷೀಯ ಸಭೆ ನಡೆಸಿದರು.
ಭಾನುವಾರ ಬೆಳಗ್ಗೆಯವರೆಗೆ ವಿಲ್ಪಿಂಗ್ಟನ್‌ನಲ್ಲಿ ಕ್ವಾಡ್ ಶೃಂಗಸಭೆ ನಡೆಯಲಿದೆ. ಇಂಡೋ-ಪೆಸಿಫಿಕ್‌ನಲ್ಲಿ ಸಹಕಾರ ಹೆಚ್ಚಿಸಲು ಮತ್ತು ಉಕ್ರೇನ್ ಮತ್ತು ಗಾಜಾದಲ್ಲಿನ ಸಂಘರ್ಷಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುಳ್ಳಲು ಸಭೆ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ. ಶೃಂಗದಲ್ಲಿ ಮೋದಿ ಹಾಗೂ ಬೈಡೆನ್ ಅಲ್ಲದೆ, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಪಾಲ್ಗೊಳ್ಳಲಿದ್ದಾರೆ.
ಇಂದು ಭಾರತೀಯರನ್ನು ಉದ್ದೇಶಿಸಿ ಭಾಷಣ:
ವಿಲ್ಮಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ ತೆರಳಲಿರುವ ಮೋದಿ, ಭಾರತೀಯ ಕಾಲಮಾನ ಭಾನುವಾರ ರಾತ್ರಿ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಮೆರಿಕದ ಉನ್ನತ ಕಂಪನಿಗಳ ಸಿಇಒಗಳ ಜತೆ ದುಂಡು ಮೇಜಿನ ಸಭೆ ನಡೆಸಿ, ಸೆಮಿಕಂಡಕ್ಟರ್, ಕೃತಕ ಬುದ್ಧಿಮತ್ತೆ- ಇತ್ಯಾದಿ ಬಗ್ಗೆ ಚರ್ಚಿಸಲಿದ್ದಾರೆ.
ನಾಳೆ ವಿಶ್ವಸಂಸ್ಥೆಯಲ್ಲಿ ಭಾಷಣ:
ಭಾರತೀಯ ಕಾಲಮಾನ ಸೋಮವಾರ ರಾತ್ರಿ ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ತೆರಳಿ, ‘ಭವಿಷ್ಯದ ಶೃಂಗಸಭೆ’ಯಲ್ಲಿ ಭಾಷಣ ಮಾಡಲಿದ್ದಾರೆ. ನಂತರ ಭಾರತಕ್ಕೆ ಮರಳಲಿದ್ದಾರೆ.
ಮೋದಿಗೆ ಭಾರೀ ಭದ್ರತೆ
ಅಮೆರಿಕದ ಮಾಜಿ ಅಧ್ಯಕ್ಷ , ಡೊನಾಲ್ಡ್ ಟ್ರಂಪ್ ಮೇಲೆ ಎರಡು ಬಾರಿ ಕೊಲೆ ಯತ್ನ ನಡೆದ ಬೆನ್ನಲ್ಲೇ, ಅಮೆರಿಕದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಸೆ.21ರಿಂದ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಮೋದಿಯವರು ತಮ್ಮ ಪ್ರವಾಸದಲ್ಲಿ ಭೇಟಿ ನೀಡಲಿರುವ ಡೆಲವೇರ್ ಮತ್ತು ನ್ಯೂಯಾರ್ಕ್‌ನಲ್ಲಿ ಸುತ್ತಮುತ್ತ ಅಮೆರಿಕದ ಸೀಕ್ರೆಟ್ ಸರ್ವೀಸ್ ಪಡೆ ಭದ್ರತೆಯನ್ನು ಜಾಸ್ತಿ ಮಾಡಿದೆ. ಜೊತೆಗೆ ಅಮೆರಿಕದಲ್ಲಿ ಖಲಿಸ್ತಾನಿ ಪರ ಮನಸ್ಥಿತಿ ಇರುವ ಕಾರಣಕ್ಕೂ ಪ್ರಧಾನಿ ಭದ್ರತೆ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಹಿನ್ನಲೆಯಲ್ಲಿ ಕಳೆದ 15 ದಿನಗಳಲ್ಲಿ ಭಾರತ ಮತ್ತು ಅಮೆರಿಕದ ಭದ್ರತಾ ಪಡೆ ಸೀಕ್ರೆಟ್ ಸರ್ವೀಸ್ ಪಡೆ ನಡುವೆ ಮೋದಿ ಭದ್ರತೆ ಬಗ್ಗೆ ಮಾತುಕತೆಗಳು ನಡೆದಿತ್ತು ಎನ್ನಲಾಗಿದೆ.
ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿ, ಮೊತ್ತ ಹೆಚ್ಚಿಸಲು ಸರ್ಕಾರದ ನಿರ್ಧಾರ!
ಅಮ್ಮನ ಮನೆಯಷ್ಟು ದೊಡ್ಡದು ನಿಮ್ಮ ಕಾರು
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಪ್ರಯಾಣಿಸಿದಾಗ ಆಗ ಅಲ್ಲಿ ಅಧ್ಯಕ್ಷರಾಗಿದ್ದಾಗ ಬರಾಕ್ ಒಬಾಮಾ ಅವರ ಜತೆ ತುಂಬಾ ಆತ್ಮೀಯವಾಗಿ ಮಾತನಾಡಿದ್ದರು. ಮೋದಿ ಆಡಿದ ಮಾತೊಂದು ಒಬಾಮಾರನ್ನು ಚಕಿತಗೊಳಿಸಿತು ಹಾಗೂ ಅದೇ ಮಾತು ಇಬ್ಬರನ್ನೂ ಹತ್ತಿರವಾಗಿಸಿತು ಎಂದು ಅಂದು ಮೋದಿ ಅವರ ಭಾಷಾಂತರಕಾರ ಆಗಿದ್ದ ಅಮೆರಿಕದಲ್ಲಿನ ಈಗಿನ ಭಾರತೀಯ ರಾಯಭಾರಿ ವಿನಯ್ ಕ್ವಾಟ್ರಾ ಹೇಳಿದ್ದಾರೆ.
ಮೋದಿ ಅಮೆರಿಕ ಭೇಟಿ ಹಿನ್ನೆಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕ್ವಾಟ್ರಾ, ‘ಅಮೆರಿಕಕ್ಕೆ 2014ರಲ್ಲಿ ಭೇಟಿ ನೀಡಿದಾಗ ಒಬಾಮಾ ಜತೆ ಇಬ್ಬರೂ ಒಟ್ಟಿಗೇ 12 ನಿಮಿಷ ಕಾರಿನಲ್ಲಿ ಪ್ರಯಾಣಿಸಿದ್ದರು. ಆಗ ಮೋದಿ ತಾಯಿಯ ಬಗ್ಗೆ ಒಬಾಮಾ ವಿಚಾರಿಸಿದರು. ಅದಕ್ಕೆ ಉತ್ತರಿಸಿದ ಮೋದಿ ‘ಗುಜರಾತ್‌ನಲ್ಲಿ ನಮ್ಮ ತಾಯಿಯ ಮನೆ ಇರುವಷ್ಟೇ ನಿಮ್ಮ ಕಾರು ದೊಡ್ಡದಿದೆ’ ಎಂದರು. ಈ ಮಾತು ಒಬಾಮಾರನ್ನು ಚಕಿತಗೊಳಿಸಿತು ಹಾಗೂ ಮೋದಿ ಅವರ ಸರಳತೆಯು ಇಬ್ಬರನ್ನೂ ಹತ್ತಿರ ಮಾಡಿತು’ ಎಂದು ಹೇಳಿದ್ದಾರೆ. ಮೋದಿ ಅವರು ಹಿಂದಿಯಲ್ಲಿ ಹೇಳಿದ್ದನ್ನು ಆಗ ಭಾಷಾಂತರಕಾರ ಆಗಿದ್ದ ಕ್ವಾಟ್ರಾ ಇಂಗ್ಲಿಷ್‌ಗೆ ತರ್ಜುಮೆ ಮಾಡಿದ್ದರು.