* ಬದುಕಿದರೂ ಸತ್ತವರ ಜೀವನ: ಜೀವ ಉಳಿಸಿಕೊಂಡವ ನೋವಿನ ಕಥೆ* ತಾಲಿಬಾನ್‌ ಆಡಳಿತದಲ್ಲಿ ಇಡೀ ದೇಶವೇ ಜೈಲಿನಂತೆ

ಕಾಬೂಲ್‌(ಸೆ.28): ತಾಲಿಬಾನ್‌(Taliban) ಉಗ್ರರು, ಅಫ್ಘಾನಿಸ್ತಾನ(Afghanistan) ವಶಪಡಿಸಿಕೊಂಡ ಬಳಿಕ ಇಡೀ ದೇಶವ ಜೈಲಿನಂತಾಗಿದೆ. ನಾಗರಿಕರೆಲ್ಲಾ ಬದುಕಿದ್ದರೂ ಸತ್ತವರಂತೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ ಎಂದು ಕಾಬೂಲ್‌ನಲ್ಲಿ(Kabul) ನೆಲೆಸಿರುವ ವ್ಯಕ್ತಿಯೊಬ್ಬ ದೇಶದ ಚಿತ್ರವನ್ನು ಭಾರತದ ಸುದ್ದಿ ವಾಹಿನಿಯೊಂದರ ಜೊತೆ ಹಂಚಿಕೊಂಡಿದ್ದಾನೆ.

‘ಉಗ್ರರು ಕಾಬೂಲ್‌(Kabul) ವಶಪಡಿಸಿಕೊಂಡ ಬಳಿಕ ನಾನು ಕುಟುಂಬ ಸಮೇತ ದೇಶ ತೊರೆಯಲು ನೋಡಿದೆ. ಅದು ಆಗಲಿಲ್ಲ. ಕೊನೆಗೆ ಉಗ್ರರ ವಿರುದ್ಧ ಸಿಡಿದೆದ್ದ ಪಂಜ್‌ಶೀರ್‌ ಕಣಿವೆಗೆ(Panjshir Valley) ತೆರಳಿ ಅಲ್ಲಿ ಅವರ ಜೊತೆ ಸೇರಿ ಉಗ್ರರ ವಿರುದ್ಧ ಹೋರಾಡಿದೆ.

ಆದರೆ ಅಲ್ಲಿಯೂ ಉಗ್ರರ ಕೈ ಮೇಲಾದ ಬಳಿಕ ಒಂದೂವರೆ ದಿನ ನಡೆದುಕೊಂಡು ಕಾಬೂಲ್‌(Kabul) ಸೇರಿಕೊಂಡೆ. ಅಂದಿನಿಂದಲೂ ನಾನು ಇಲ್ಲಿ ಅಡಗಿಕೊಂಡು ಜೀವನ ಸಾಗಿಸುತ್ತಿದ್ದೇನೆ. ನನ್ನ ಕುಟುಂಬದ ಸದಸ್ಯರು ಒಬ್ಬೊಬ್ಬರು ಒಂದೊಂದು ಕಡೆ ಇದ್ದಾರೆ. ಬದುಕು ಸಾವಿಗೆ ಸಮವಾಗಿದೆ’ ಎಂದು ತನ್ನ ನೋವನ್ನು ತೋಡಿಕೊಂಡಿದ್ದಾನೆ.

‘ಮಹಿಳೆಯರು ಕೆಲಸ ಮಾಡುವುದಕ್ಕೆ ತಾಲಿಬಾನ್‌(Taliban) ಸಂಪೂರ್ಣ ನಿರ್ಬಂಧ ವಿಧಿಸಿದೆ. ಜೊತೆಗೆ ಶಾಲೆ ಮತ್ತು ಕಾಲೇಜುಗಳಿಗೆ ಹೋಗುವ ಅವಕಾಶಗಳನ್ನೂ ಕಳೆದುಕೊಂಡಿದ್ದಾರೆ. ತಾಲಿಬಾನ್‌ ಆಡಳಿತದಲ್ಲಿ ಮಹಿಳೆಯರ ಬದುಕು ಚಿಂತಾಜನಕವಾಗಿದೆ. ಆದರೆ ಭಾರತ ಹಲವು ಧರ್ಮಗಳಿಗೆ ಜಾಗ ನೀಡಿದೆ.

ಭಾರತದಲ್ಲಿ ನಾನು ವಿದ್ಯಾಭ್ಯಾಸ ಮಾಡಿರುವುದರಿಂದ ಇದನ್ನು ಕಂಡುಕೊಂಡಿದ್ದೇನೆ. ಭಾರತೀಯರು ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತಿದ್ದಾರೆ. ನನ್ನ ಭಾರತೀಯ ಮಿತ್ರರು ಕರೆ ಮಾಡಿ ಇಲ್ಲಿ ನನ್ನ ಪರಿಸ್ಥಿತಿಯ ಬಗ್ಗೆ ವಿಚಾರಿಸಿದ್ದಾರೆ. ಭಾರತಕ್ಕೆ ನಾನು ಸದಾ ಆಭಾರಿ ಎಂದು ಹೇಳಿದ್ದಾನೆ.