ತಾಲಿಬಾನ್ ಕ್ರೌರ್ಯ: ಅಂದರಾಬ್ ಕಣಿವೆಗೆ ಆಹಾರ, ತೈಲ ಪೂರೈಕೆ ಕಡಿತ!
* ತಮ್ಮ ವಶಕ್ಕೆ ಸಿಗದ ಪ್ರದೇಶದ ಮೇಲೆ ಸೇಡು
* ಅಂದರಾಬ್ ಕಣಿವೆಗೆ ಆಹಾರ, ತೈಲ ಪೂರೈಕೆ ಕಡಿತಗೊಳಿಸಿದ ತಾಲಿಬಾನ್
* ಮಹಿಳೆ, ಮಕ್ಕಳ ಗುರಾಣಿ ಮಾಡಿಕೊಂಡು ಮನೆಗಳ ಶೋಧ
ಕಾಬೂಲ್(ಆ.25): ಬಹುತೇಕ ಅಷ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವ ತಾಲಿಬಾನ್ ಉಗ್ರರು, ಈಗ ತಮ್ಮ ಹಿಡಿತಕ್ಕೆ ಬಾರದ ಅದರಾಬ್ ಕಣಿವೆಯ ಮೇಲೆ ಕೆಲವು ಪ್ರತಿಬಂಧಗಳನ್ನು ವಿಧಿಸಿ ಅಮಾನವೀಯತೆಯ ಮತ್ತೊಂದು ಮುಖ ಪ್ರದರ್ಶಿಸಿದ್ದಾರೆ. ಅಂದರಾಬ್ ಕಣಿವೆಗೆ ಆಹಾರ ಮತ್ತು ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅಷ್ಘಾನಿಸ್ತಾದ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ಹೇಳಿದ್ದಾರೆ.
ಇನ್ನೊಂದೆಡೆ ತಾವು ಅಪಹರಿಸಿದ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಮುಂದಿಟ್ಟುಕೊಂಡು ಮನೆಗಳ ಶೋಧ ನಡೆಸುತ್ತಿದ್ದಾರೆ. ತಾವು ಹೋಗುವ ಕಡೆಯಲ್ಲೆಲ್ಲಾ ಅವರನ್ನು ಗುರಾಣಿಯನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಅಷ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ಮಾನವೀಯತೆಗೆ ಬೆಲೆಯೇ ಇಲ್ಲದಂತಾಗಿದೆ. ಸಾವಿರಾರು ಮಹಿಳೆಯರು ಮತ್ತು ಮಕ್ಕಳು ತಾಲಿಬಾನಿಗಳ ಭಯದಿಂದ ಗುಡ್ಡಬೆಟ್ಟಗಳಲ್ಲಿ ಅಡಗಿ ಕುಳಿತಿದ್ದಾರೆ. ಕಳೆದ ಎರಡು ದಿನದಿಂದ ತಾಲಿಬಾನಿಗಳು ತಾವು ಅಪಹರಿಸಿದ ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಗುರಾಣಿಯನ್ನಾಗಿಸಿಕೊಂಡು ಓಡಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.