ಭಾರತಕ್ಕೆ ಬಂದಿಳಿದ ಅಪ್ಘಾನ್ ಸಚಿವರು: ಪಿಎಂ ಮೋದಿ, ವಾಯುಪಡೆಗೆ ಧನ್ಯವಾದ!
* ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ 87 ನಾಗರಿಕರು
* ಅಪ್ಘಾನ್ ಸಚಿವರು ಮತ್ತು ಕುಟುಂಬವೂ ಸೇಫ್
* ತಮ್ಮನ್ನು ರಕ್ಷಿಸಿದ್ದಕ್ಕೆ ಮೋದಿ, ಭಾರತೀಯ ವಾಯುಸೇನೆಗೆ ಧನ್ಯವಾದ ಎಂದ ಸಚಿವರು
ಕಾಬೂಲ್(ಆ.22): ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಿಂದ 87 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಎಲ್ಲಾ 87 ಭಾರತೀಯರು ವಿಶೇಷ ವಿಮಾನದ ಮೂಲಕ ದೆಹಲಿ ತಲುಪಿದ್ದಾರೆ. ಅವರಲ್ಲಿ ಇಬ್ಬರು ನೇಪಾಳಿ ಪ್ರಜೆಗಳೂ ಆಗಿದ್ದಾರೆ. ತಮ್ಮ ತಾಯ್ನಾಡಿಗೆ ಮರಳಿದ ಸಂತೋಷದಲ್ಲಿ, ಭಾವುಕರಾದ ಜನರು ವಿಮಾನದಲ್ಲಿಯೇ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗಿದ್ದಾರೆ. ಈ ಭಾರತೀಯರನ್ನು ಎರಡು ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ.
107 ಭಾರತೀಯರು ಸೇರಿದಂತೆ 168 ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾತನಾಡಿ, ಭಾರತಕ್ಕೆ ಕರೆತರುವ ಭಾರತೀಯರನ್ನು ಮೊದಲು ಕಾಬೂಲ್ ನಿಂದ ತಜಕಿಸ್ತಾನದ ರಾಜಧಾನಿ ದುಶಾನ್ಬೆ ಮತ್ತು ಕತಾರ್ ರಾಜಧಾನಿ ದೋಹಾಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಂದ ಅವರನ್ನು ನಿನ್ನೆ ರಾತ್ರಿ ಭಾರತಕ್ಕೆ ಕಳುಹಿಸಲಾಯಿತು. 168 ಜನರು ಭಾರತಕ್ಕೆ ಬರುತ್ತಿದ್ದಾರೆ, ಅದರಲ್ಲಿ 107 ಭಾರತೀಯರು ಎಂದು ವಕ್ತಾರರು ತಿಳಿಸಿದ್ದಾರೆ.
ಭಾರತಕ್ಕೆ ಬಂದಿಳಿದ ಅಫ್ಘಾನ್ ಸಂಸದ ಮತ್ತು ಕುಟುಂಬ
ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಹದಗೆಟ್ಟ ಬಳಿಕ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಭಾರತೀಯರು ಕೂಡ ಈಗ ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ. ಅಫ್ಘಾನಿ ಸಿಖ್ಖರು ಮತ್ತು ಇತರ ಅಲ್ಪಸಂಖ್ಯಾತ ಹಿಂದುಗಳೂ ಅಲ್ಲಿಂದ ಬೇರೆ ದೇಶಗಳಿಗೆ ತೆರಳುತ್ತಿದ್ದಾರೆ. ಅಫ್ಘಾನ್ ಸಂಸದರಾದ ಅನಾರ್ಕಲಿ ಹೊನ್ರಾಯರ್, ನರೇಂದ್ರ ಸಿಂಗ್ ಖಾಲ್ಸಾ ತಮ್ಮ ಕುಟುಂಬದೊಂದಿಗೆ ದೇಶವನ್ನು ತೊರೆದಿದ್ದಾರೆ. ಇಬ್ಬರೂ ತಮ್ಮ ಕುಟುಂಬದೊಂದಿಗೆ ಕಾಬೂಲ್ ವಿಮಾನ ನಿಲ್ದಾಣದಕ್ಕೆ ತಲುಪಿದ್ದು, ಭಾರತಕ್ಕೆ ಕರೆತರಲಾಗುತ್ತಿದೆ. ಸಂಸದ ನರೇಂದ್ರ ಸಿಂಗ್ ಖಾಲ್ಸಾ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ಕಾಬೂಲ್‌ನಿಂದ ಬರುವ ಮುಂದಿನ ವಿಮಾನದಲ್ಲಿ 23 ಅಫ್ಘಾನಿಸ್ತಾನ ಹಿಂದುಗಳು ಮತ್ತು ಸಿಖ್ಖರು ಭಾಗಿಯಾಗಲಿದ್ದಾರೆ ಎಂದು ಭಾರತೀಯ ವಿಶ್ವ ವೇದಿಕೆ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್ ಮಾಹಿತಿ ನೀಡಿದ್ದಾರೆ.
ಶನಿವಾರ ತಾಲಿಬಾನ್ ತಮ್ಮೊಂದಿಗೆ ಕರೆದೊಯ್ದವರಲ್ಲಿ ಹೊನ್ರಾಯಾರ್ ಮತ್ತು ಖಾಲ್ಸಾ ಕೂಡಾ ಇದ್ದರು. ಅವರು ಆಫ್ಘನ್ನರು, ಹಾಗಾಗಿ ಅವರು ದೇಶವನ್ನು ತೊರೆಯಲು ಸಾಧ್ಯವಿಲ್ಲ ಎಂದು ತಾಲಿಬಾನ್ ಹೇಳಿತ್ತು. ಹೀಗಿದ್ದರೂ ಬಳಿಕ ಅವರನ್ನು ಬಿಟ್ಟು ಕಳುಹಿಸಿದ್ದರು.
ಪ್ರತಿದಿನ ಎರಡು ವಿಮಾನಗಳು ಭಾರತಕ್ಕೆ
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರು ಮರಳುವ ಮಾರ್ಗ ಸುಲಭವಾಗಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಪ್ರತಿದಿನ ಎರಡು ವಿಮಾನಗಳನ್ನು ನಿರ್ವಹಿಸಲು ಭಾರತಕ್ಕೆ ಅನುಮತಿ ಸಿಕ್ಕಿದೆ. ಯುಎಸ್ ಮತ್ತು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ ಪಡೆಗಳು ಶನಿವಾರ ಅದಕ್ಕೆ ಅನುಮತಿ ನೀಡಿವೆ. ಈಗ ಅವರು ಶೀಘ್ರದಲ್ಲೇ ಎಲ್ಲ ಭಾರತೀಯರನ್ನು ಮರಳಿ ಕರೆತರಲಿದ್ದಾರೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ. ಇದೀಗ 300 ಭಾರತೀಯರು ಇಲ್ಲಿ ಸಿಕ್ಕಿಬಿದ್ದಿರುವ ಮಾಹಿತಿ ಇದೆ.
200ಕ್ಕೂ ಅಧಿಕ ಮಂದಿಯ ಏರ್‌ಲಿಫ್ಟ್
ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಸೇರಿದಂತೆ 200 ಜನರನ್ನು ಈಗಾಗಲೇ ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ. ಮೊದಲ ಹಂತದಲ್ಲಿ 50 ಮಂದಿಯನ್ನು ಹಾಗೂ ಎರಡನೇ ಹಂತದಲ್ಲಿ 150 ಮಂದಿಯನ್ನು ತೆರವುಗೊಳಿಸಲಾಗಿದೆ. ಇನ್ನುಳಿದ ಭಾರತೀಯರ ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಕಾಬೂಲ್ ಏರ್‌ಪೋರ್ಟ್‌ನಿಂದ ನಿತ್ಯ 2 ವಿಮಾನಗಳ ಸಂಚಾರಕ್ಕೆ ಭಾರತಕ್ಕೆ ಅಮೆರಿಕ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.