ಅಬು ದಾಬಿ(ಡಿ.04): ಸರ್ಕಾರಿ ಸಮಾರಂಭದಲ್ಲಿ ಕೈಕುಲುಕಲು ಬಂದ ಬಾಲಕಿಯನ್ನು ನೋಡದೇ ಮುಂದೆ ಸಾಗಿದ್ದ ಅಬು ದಾಬಿ ದೊರೆ ಶೇಖ್ ಮೊಹ್ಮದ್ ಬಿನ್ ಜಯೈದ್, ಬಳಿಕ ಬಾಲಕಿಯ ಮನೆಗೇ ತೆರಳಿ ಆಕೆಯನ್ನು ಭೇಟಿ ಮಾಡಿದ ಅಪರೂಪದ ಪ್ರಹಸನ ನಡೆದಿದೆ.

ಸೌದಿ ಅರೇಬಿಯಾದ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಅಬು ದಾಬಿ ಪ್ರವಾಸದಲ್ಲಿದ್ದು, ಈ ವೇಳೆ ಸೌದಿ ದೊರೆಯನ್ನು ಸ್ವಾಗತಿಸಲು ಮಕ್ಕಳ ಗುಂಪೊಂದು ಅಧ್ಯಕ್ಷರ ಅರಮನೆ ಮುಂದೆ ಜಮಾಯಿಸಿತ್ತು.

ಈ ವೇಳೆ ಸೌದಿ ದಿರೆ ಹಾಗೂ ಅಬು ದಾಬಿ ದೊರೆ ಮಕ್ಕಳ ಕೈಕುಲುಕುತ್ತ ಮುಗುಳ್ನಗೆಯಿಂದ ಮುನ್ನಡೆಯುತ್ತಿದ್ದರು. ಆದರೆ ಸರತಿ ಸಾಲಿನಲ್ಲಿ ಕೊನೆಯಲ್ಲಿ ಆಯಿಶಾ ಅಲ್ ಮಜ್ರೋಯಿ ಎಂಬ ಬಾಲಕಿ ದೊರೆಯ ಕೈಕುಕುಕಲು ಮುಂದಾದಾಗ ಆಕೆಯತ್ತ ನೋಡದೇ ಶೇಖ್ ಮೊಹ್ಮದ್ ಮುಂದೆ ಸಾಗಿದ್ದರು.

ಬಳಿಕ ಬಾಲಕಿ ತಮ್ಮ ಕೈಕುಲುಕಲು ಮುಂದೆ ಬಂದಿದ್ದ ವಿಡಿಯೋ ನೋಡಿದ್ದ ಶೇಖ್ ಮೊಹ್ಮದ್, ಆಯಿಶಾ ಮನೆಗೆ ತೆರಳಿ ಆಕೆಯ ಹಣೆಗೆ ಮುತ್ತಿಟ್ಟು ಆಶೀರ್ವದಿಸಿದ್ದಾರೆ.

ಖುದ್ದು ಅಬು ದಾಬಿ ದೊರೆ ತಮ್ಮ ಮನೆಗೆ ಬಂದಿರುವುದನ್ನು ನಂಬಲಾಗದ ಪುಟಾಣಿಗಳು, ಆಶ್ವರ್ಯಕರ ಕಣ್ಣುಗಳಿಂದ ಅವರನ್ನೇ ನೋಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.