ಬೋಗನ್‌ಗೇಟ್‌ (ಮೇ.29): ಕೊರೋನಾ ಸಾಂಕ್ರಾ​ಮಿ​ಕದಿಂದ ಚೇತರಿಸಿಕೊಳ್ಳುವ ಹೊತ್ತಿಗೇ ಆಸ್ಪ್ರೇಲಿಯಾ ಜನರಿಗೆ ಇದೀಗ ಇಲಿಗಳ ದಾಳಿಯ ಭಾರೀ ಸಮಸ್ಯೆ ಎದುರಾಗಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಇಲಿಗಳು ದೇಶದ ಪೂರ್ವದ ರಾಜ್ಯಗಳ ಮೇಲೆ ದಾಳಿ ಮಾಡಿದ್ದು, ಸಾವಿರಾರು ಕೋಟಿ ಮೌಲ್ಯದ ಕೃಷಿ ಉತ್ಪನ್ನಗಳನ್ನು ತಿಂದು ಹಾಕಿವೆ. ಅಷ್ಟುಮಾತ್ರವಲ್ಲ ರಾತ್ರಿ ಹೊತ್ತಿನಲ್ಲಿ ಜನವಸತಿ ಪ್ರದೇಶಗಳ ಮೇಲೆ ದಾಳಿ ಮಾಡಿ ಮನೆಯಲ್ಲಿನ ವಸ್ತುಗಳನ್ನೆಲ್ಲಾ ನಾಶ ಮಾಡುತ್ತಿವೆ.

ಕಳೆದ 4-5 ದಶಕಗಳಲ್ಲೇ ದೊಡ್ಡ ಮಟ್ಟದ್ದು ಎನ್ನಲಾದ ಈ ಇಲಿಗಳ ದಾಳಿಯಿಂದ ಪಾರಾಗಲು ಆಸ್ಪ್ರೇಲಿಯಾ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳು ಹರಸಾಹಸ ಮಾಡುತ್ತಿವೆ. ಒಂದು ವೇಳೆ ಇಲಿ​ಗ​ಳ ಸಂತತಿ ನಿಯಂತ್ರ​ಣಕ್ಕೆ ಬರದೇ ಹೋದರೆ ಆಸ್ಪ್ರೇ​ಲಿ​ಯಾ​ದಲ್ಲಿ ಸಾಂಕ್ರಾ​ಮಿ​ಕ ರೋಗ​ಗಳು ಹರ​ಡು​ವ ಭೀತಿ ಎದು​ರಾ​ಗಿ​ದೆ. ಹೀಗಾಗಿ ಇಲಿ​ಗಳ ನಿಯಂತ್ರ​ಣಕ್ಕೆ ನ್ಯೂ ಸೌತ್‌ ವೇಲ್ಸ್‌ ಸರ್ಕಾರ 5000 ಲೀಟರ್‌ ನಿಷೇ​ಧಿತ ಬ್ರೊಮಾಡಿಯೋ​ಲೋನ್‌ ವಿಷ​ ಪದಾ​ರ್ಥವನ್ನು ತರಿ​ಸಿ​ಕೊ​ಳ್ಳಲು ಭಾರತಕ್ಕೆ ಬೇಡಿಕೆ ಸಲ್ಲಿಸಿದೆ.

ಏನಿದು ಇಲಿ ದಾಳಿ?:

ಆಸ್ಪ್ರೇಲಿಯಾದ ಪೂರ್ವದ ರಾಜ್ಯಗಳ ಮೇಲೆ ಸಣ್ಣ ಪ್ರಮಾಣದಲ್ಲಿ 5-10 ವರ್ಷಗಳಿಗೊಮ್ಮೆ ಸಾವಿರಾರು ಪ್ರಮಾಣದಲ್ಲಿ ಇಲಿಗಳು ದಾಳಿ ನಡೆಸುವುದು ಸಾಮಾನ್ಯ. ಆದರೆ ಪೂರ್ವದ ಹಲವು ರಾಜ್ಯಗಳಲ್ಲಿ ಈ ವರ್ಷ 50 ವರ್ಷದ ಬರ ನೀಗಿಸುವಂತೆ ಭರ್ಜರಿ ಮಳೆಯಾಗಿದೆ. ಪರಿಣಾಮ ಭಾರೀ ಕೃಷಿ ಫಸಲು ಬಂದಿದೆ. ಆದರೆ ಇದೇ ವೇಳೆ ಉತ್ತಮ ಮಳೆಯಿಂದಾಗಿ ಸೃಷ್ಟಿಯಾಗಿರುವ ವಾತಾವರಣವು ಇಲಿಗಳ ಸಂತತಿ ಹೆಚ್ಚಳ ಮತ್ತು ದಾಳಿ ನಡೆಸಲು ಪೂರಕವಾಗಿದೆ.

ಹೀಗಾಗಿ ಈ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಇಲಿಗಳು ಕೃಷಿ ಚಟುವಟಿಕೆ ಪ್ರದೇಶಗಳ ಮೇಲೆ ದಾಳಿ ನಡೆಸಿ, ಈ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಗೋಧಿ, ಬಾರ್ಲಿ, ಕ್ಯಾನೋಲಾ ಬೆಳೆಗಳನ್ನು ತಿಂದು ಮುಗಿಸುತ್ತಿವೆ. ಅವುಗಳ ದಾಳಿಗೆ ಅಂದಾಜು 5500 ಕೋಟಿ ರು.ಮೌಲ್ಯದ ಕೃಷಿ ಉತ್ಪನ್ನ ನಾಶವಾಗಬಹುದು ಎಂದು ಅಂದಾಜಿಸಲಾಗಿದೆ.

ಹಗಲು ಹೊತ್ತು ಹೊಲಗಳ ಮೇಲೆ ದಾಳಿ ನಡೆಸುತ್ತಿರುವ ಇಲಿ ಸೇನೆ, ರಾತ್ರಿ ವೇಳೆ ಮನೆಗಳ ತಳಪಾಯವನ್ನೇ ಕೊರೆದು ಮನೆಯೊಳಗೆ ಸೇರಿಕೊಳ್ಳುತ್ತಿವೆ. ಎಲೆ​ಕ್ಟ್ರಿಕ್‌ ವೈರ್‌​ಗ​ಳನ್ನು ಕಡಿದು ನಾಶ ಮಾಡು​ತ್ತಿದ್ದು, ಅಗ್ನಿ ಅವ​ಘ​ಡ​ಗ​ಳು ಸಂಭ​ವಿ​ಸು​ತ್ತಿವೆ. ಅಲ್ಲದೆ ಕಂಡಕಂಡ ವಸ್ತುಗಳನ್ನು ಕಡಿದು ನಾಶ ಮಾಡುತ್ತಿವೆ. ಜೊತೆಗೆ ಆಸ್ಪತ್ರೆ, ಶಾಲೆ, ಕಚೇರಿಗಳಲ್ಲೂ ಇವುಗಳ ಹಾವಳಿ ಹೆಚ್ಚಾಗಿದ್ದು, ಜನರ ಸಮಸ್ಯೆಯನ್ನು ಇಮ್ಮಡಿಗೊಳಿಸಿದೆ.