ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಗಳ ಕುರಿತು 50 ದೇಶಗಳು ಮಾತುಕತೆ ನಡೆಸುತ್ತಿವೆ. ಟ್ರಂಪ್ ತೆರಿಗೆ ಹಿಂಪಡೆಯಲು ನಿರಾಕರಿಸಿದ್ದು, ಚೀನಾಕ್ಕೆ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌: ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜತೆ ಈಗ ವಿಶ್ವದ 50 ದೇಶಗಳು ಸುಂಕ ಇಳಿಕೆ ಬಗ್ಗೆ ಮಾತುಕತೆ ನಡೆಸುತ್ತಿವೆ ಹಾಗೂ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ ಎಂಬ ಕುತೂಹಲದ ವಿಷಯ ಹೊರಬಿದ್ದಿದೆ.ಖುದ್ದು ಟ್ರಂಪ್‌ ಆಪ್ತರಾದ ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಈ ವಿಷಯ ತಿಳಿಸಿದ್ದಾರೆ. ಟ್ರಂಪ್‌ ಕೂಡ ಇದನ್ನು ದೃಢಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಮಾತನಾಡಿದ ಹ್ಯಾಸೆಟ್, ‘ಮಾತುಕತೆಯನ್ನು ಪ್ರಾರಂಭಿಸಲು 50ಕ್ಕೂ ಹೆಚ್ಚು ದೇಶಗಳು ಅಧ್ಯಕ್ಷರ ಸಂಪರ್ಕದಲ್ಲಿವೆ ಎಂದು ನಿನ್ನೆ ರಾತ್ರಿ ನನಗೆ ವರದಿ ಸಿಕ್ಕಿದೆ. ತಾವು ಹೆಚ್ಚು ಸುಂಕ ಹಾಕುತ್ತಿದ್ದೇವೆ ಎಂದು ಆ ದೇಶಗಳಿಗೆ ಅರ್ಥವಾಗಿದೆ. ಹೀಗಾಗಿ ಅವು ಮಾತುಕತೆಗೆ ಮುಂದಾಗಿವೆ’ ಎಂದಿದ್ದಾರೆ.ಇದನ್ನು ದೃಢಪಡಿಸಿರುವ ಟ್ರಂಪ್‌, ‘ನಾನು ವಿಶ್ವದ, ಯುರೋಪ್‌ ಹಾಗೂ ಏಷ್ಯಾದ ಅನೇಕ ನಾಯಕರ ಜತೆ ಮಾತನಾಡಿದ್ದೇನೆ. ಅವರು ಅಮೆರಿಕ ಜತೆ ಒಪ್ಪಂದ ಮಾಡಿಕೊಳ್ಳಲು ಹಾತೊರೆಯುತ್ತಿದ್ದಾರೆ. ಒಪ್ಪಂದದಿಂದ ನಿಮಗೇನೂ ನಷ್ಟವಾಗುವುದಿಲ್ಲ ಎಂದು ನಾನು ಅವರಿಗೆ ಸ್ಪಷ್ಟಪಡಿಸಿದ್ದೇನೆ’ ಎಂದು ಹೇಳಿದ್ದಾರೆ.

ತೆರಿಗೆ ಹಿಂಪಡೆಯಲು ಟ್ರಂಪ್ ನಿರಾಕರಣೆ
ವಿಶ್ವದ ಅನೇಕ ದೇಶಗಳ ವಸ್ತುಗಳ ಆಮದಿಗೆ ಭಾರಿ ಸುಂಕ ಘೋಷಿಸಿ ವಿಶ್ವಾದ್ಯಂತ ಆರ್ಥಿಕ ವಿಪ್ಲವಕ್ಕೆ ಕಾರಣವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಸುಂಕ ಘೋಷಣೆಯಿಂದ ಹಿಂದೆ ಸರಿಯುವ ಸಾಧ್ಯತೆಗಳನ್ನು ಸೋಮವಾರ ನಿರಾಕರಿಸಿದ್ದಾರೆ. ‘ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಖಡಕ್ಕಾಗಿ ಹೇಳಿದ್ದಾರೆ. ಅಲ್ಲದೆ, ಚೀನಾ ತನ್ನ ಪ್ರತಿತೆರಿಗೆ ಹಿಂಪಡೆಯದಿದ್ದರೆ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ-ಚೀನಾ ಟ್ರೇಡ್‌ ವಾರ್‌ ನಡುವೆ, ಮೂರು ವರ್ಷದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದ ಕಚ್ಚಾತೈಲದ ಬೆಲೆ!

ಇದೇ ವೇಳೆ ತಮ್ಮ ಟ್ರುತ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕಚ್ಚಾತೈಲ ಬೆಲೆಗಳು ಕಡಿಮೆಯಾಗಿವೆ, ಬಡ್ಡಿದರಗಳು ಕಡಿಮೆಯಾಗಿವೆ. ಆಹಾರ ಬೆಲೆಗಳು ಕಡಿಮೆಯಾಗಿವೆ, ಹಣದುಬ್ಬರವಿಲ್ಲ. ಅಮೆರಿಕವನ್ನು ದುರುಪಯೋಗಪಡಿಸಿಕೊಂಡು ಭಾರಿ ಸುಂಕ ಪೀಕಿದ್ದ ದೇಶಗಳಿಂದ ಶತಕೋಟಿ ಡಾಲರ್‌ನಷ್ಟು ಹಣ ಮರಳಿ ತರುತ್ತಿದ್ದೇನೆ’ ಎಂದಿದ್ದಾರೆ. ಈ ಮೂಲಕ ತಮ್ಮ ತೆರಿಗೆ ಹೇರಿಕೆ ಕ್ರಮ ಸಮರ್ಥಿಸಿದ್ದಾರೆ.ಇದಕ್ಕೂ ಮುನ್ನ ಫ್ಲೋರಿಡಾ ಪ್ರವಾಸದಲ್ಲಿದ್ದ ಅವರು ಅಮೆರಿಕ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿನ ಕುಸಿತಕ್ಕೆ ಪ್ರತಿಕ್ರಿಯಿಸಿ, ‘ಮಾರುಕಟ್ಟೆಗಳಿಗೆ ಏನಾಗಲಿದೆ ಎಂದು ನಾನು ನಿಮಗೆ ಹೇಳಲಾರೆ. ಜಾಗತಿಕ ಮಾರುಕಟ್ಟೆಗಳು ಕುಸಿತ ಕಾಣುವುದು ನನಗೆ ಇಷ್ಟವಿಲ್ಲ. ಆದರೆ ಹಾಗಂತ ಕೆಲವು ವಿಪ್ಲವಗಳು ಸಂಭವಿಸಿದರೂ ಅದರಿಂದ ನನಗೆ ಚಿಂತೆಯಿಲ್ಲ. ಆದರೆ ನಮ್ಮ ದೇಶವು ಹೆಚ್ಚು ಬಲಿಷ್ಠವಾಗಿದೆ’ ಎಂದರು.

‘ಇತರ ದೇಶಗಳು ನಮ್ಮನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡಿವೆ. ಕೆಲವೊಮ್ಮೆ ಏನನ್ನಾದರೂ ಸರಿಪಡಿಸಲು ನೀವು ಔಷಧಿ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಮಾರ್ಮಿಕವಾಗಿ ನುಡಿದರು.ಟ್ರಂಪ್‌ ಘೋಷಿಸಿರುವ ಪರಿಷ್ಕೃತ ಆಮದು ಸುಂಕ ಬುಧವಾರದಿಂದ ಜಾರಿಗೆ ಬರಲಿದೆ. ಅವರು ಭಾರತದ ಮೇಲೆ ಶೇ.26, ಚೀನಾ ಮೇಲೆ ಹೆಚ್ಚುವರಿ ಶೇ.34 ಹಾಗೂ ವಿಶ್ವದ ಇನ್ನೂ ಅನೇಕ ದೇಶಗಳ ಮೇಲೆ ಭಾರಿ ಪ್ರಮಾಣದ ಆಮದು ಸುಂಕ ಹೇರಿದ್ದಾರೆ.

ಇದನ್ನೂ ಓದಿ: ಭಾರತೀಯ ಉದ್ಯಮಿಗಳಿಗೆ ಆಫರ್ ಕೊಟ್ಟ ನ್ಯೂಜಿಲೆಂಡ್ ಪ್ರಧಾನಿ, ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದೇನು?