ಹಿಂಸಾಪೀಡಿತ ಸುಡಾನ್‌ನಲ್ಲಿ 31 ಜನ ಕನ್ನಡಿಗ ಹಕ್ಕಿಪಿಕ್ಕಿಗಳು ಅತಂತ್ರ
ಆಫ್ರಿಕಾದ ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆ ಮಧ್ಯೆ ನಡೆದಿರುವ ತೀವ್ರ ಘರ್ಷಣೆಯಲ್ಲಿ ಓರ್ವ ಭಾರತೀಯ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬೆನ್ನಲ್ಲೇ ಆಯುರ್ವೇದ, ಗಿಡಮೂಲಿಕೆಗಳ ಮಾರಾಟಕ್ಕೆಂದು ತೆರಳಿದ್ದ ಕರ್ನಾಟಕ ಮೂಲದ 800ಕ್ಕೂ ಹೆಚ್ಚು ಮಂದಿ ಅಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ನಾಗರಾಜ ಎಸ್.ಬಡದಾಳ್, ಕನ್ನಡಪ್ರಭ ವಾರ್ತೆ
ದಾವಣಗೆರೆ: ಆಫ್ರಿಕಾದ ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆ ಮಧ್ಯೆ ನಡೆದಿರುವ ತೀವ್ರ ಘರ್ಷಣೆಯಲ್ಲಿ ಓರ್ವ ಭಾರತೀಯ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬೆನ್ನಲ್ಲೇ ಆಯುರ್ವೇದ, ಗಿಡಮೂಲಿಕೆಗಳ ಮಾರಾಟಕ್ಕೆಂದು ತೆರಳಿದ್ದ ಕರ್ನಾಟಕ ಮೂಲದ 800ಕ್ಕೂ ಹೆಚ್ಚು ಮಂದಿ ಅಲ್ಲಿ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.ದಾವಣಗೆರೆ ಜಿಲ್ಲೆಯ 200 ಸೇರಿದಂತೆ ರಾಜ್ಯದ ಸುಮಾರು 800 ಮಂದಿ ಹಕ್ಕಿ ಪಿಕ್ಕಿ ಜನಾಂಗದವರು ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.
ಕಳೆದ 3-4 ದಿನಗಳಿಂದ ಸುಡಾನ್‌ನ (Sudan) ಸೇನಾ ಪಡೆ ಹಾಗೂ ಅರೆ ಸೇನಾ ಪಡೆ ಮಧ್ಯೆ ಭುಗಿಲೆದ್ದಿರುವ ದಳ್ಳುರಿಯಲ್ಲಿ ಜನವಸತಿ ಪ್ರದೇಶಗಳ ಮೇಲೆ ಬಾಂಬ್, ಗುಂಡು, ಕ್ಷಿಪಣಿಗಳ ಮೂಲಕ ನಡೆದಿರುವ ದಾಳಿಯಿಂದಾಗಿ ಜನರು ಜೀವ ಕೈಯಲ್ಲಿಡಿದು ದಿನ ಎಣಿಸುತ್ತಿದ್ದಾರೆ. ಎರಡೂ ಪಡೆಗಳು ಸರ್ಕಾರಿ ಕಟ್ಟಡ, ಖಾಸಗಿ ಕಟ್ಟಡ, ವಿಮಾನ ನಿಲ್ದಾಣ, ಬಸ್ಸು ನಿಲ್ದಾಣ, ವಿಮಾನಗಳು, ಸಾರ್ವಜನಿಕ ಸಾರಿಗೆ ಹೀಗೆ ಎಲ್ಲೆಡೆ ದಾಳಿ ನಡೆಸಿ ಒಂದೊಂದಾಗಿ ನಾಶಪಡಿಸುತ್ತಿವೆ. ಈಗಾಗಲೇ ಸುಡಾನ್‌ನ ರಾಜಧಾನಿ ಖಾರ್ಟೋಮ್ (Khartoum) ಉಭಯ ಸೇನಾ ಪಡೆಗಳ ದಾಳಿಯಿಂದಾಗಿ ಜರ್ಝರಿತವಾಗಿದ್ದು, ಅಲ್ಲಿನ ವಿಮಾನ ನಿಲ್ದಾಣ, ದೊಡ್ಡ ಕಟ್ಟಡಗಳೆಲ್ಲಾ ನಾಶವಾಗಿ ನಗರ ಸಂಪೂರ್ಣ ಅವನತಿಯತ್ತ ಸಾಗಿದೆ ಎನ್ನುತ್ತಾರೆ ಸುಡಾನ್‌ಗೆ ತೆರಳಿ, ಅತಂತ್ರರಾಗಿ ಉಳಿದಿರುವ ಕನ್ನಡಿಗರು.
ಮಲ್ಲಿಗೆನಹಳ್ಳಿ ಹಕ್ಕಿಪಿಕ್ಕಿ ಕ್ಯಾಂಪ್‌ನಲ್ಲಿ ಮನೆಗಳ ತೆರವು
ಸುಡಾನ್‌ನ ಅಲ್ಬಶೇರ್ (Al basher)ನಗರದ ಮನೆಯೊಂದರಲ್ಲಿ ಕರ್ನಾಟಕ ಮೂಲದ ಹಕ್ಕಿ ಪಿಕ್ಕಿ ಜನಾಂಗದ 800ಕ್ಕೂ ಅಧಿಕ ಜನ ಕಳೆದ 10 ದಿನಗಳಿಂದ ವಾಸಿಸುತ್ತಿದ್ದಾರೆ. ಈ ಪೈಕಿ, ದಾವಣಗೆರೆ ಜಿಲ್ಲೆ ಚನ್ನಗಿರಿ (Channagiri) ತಾಲೂಕು ಗೋಪಾಲ ಗ್ರಾಮದ ಐವರು, ಶಿವಮೊಗ್ಗ ಜಿಲ್ಲೆಯ 7 ಮಂದಿ, ಮೈಸೂರು ಜಿಲ್ಲೆ ಹುಣಸೂರು (Hunasur) ತಾಲೂಕಿನ 19 ಮಂದಿ ಸೇರಿ ಅನೇಕರು ಈಗ ಸುಡಾನ್ ಘರ್ಷಣೆಯಲ್ಲಿ ಸಿಲುಕಿದ್ದು, ಅತ್ತ ಸುರಕ್ಷಿತವೂ ಅಲ್ಲದ, ಇತ್ತ ಅನ್ನಾಹಾರ, ನೀರು ಸಹ ಇಲ್ಲದೇ ಕಳೆದ 3-4 ದಿನಗಳಿಂದಲೂ ಪರಿತಪಿಸುತ್ತಿದ್ದಾರೆ.
ಕರ್ನಾಟಕದ (Karnataka) ಮೂಲಕ ಹಕ್ಕಿ ಪಿಕ್ಕಿ ಜನಾಂಗದ ಕೆಲ ಕುಟುಂಬಗಳು ಆಯುರ್ವೇದ, ಗಿಡಮೂಲಿಕೆ, ನಾಟಿ ಔಷಧಿ ಮಾರಾಟಕ್ಕೆಂದು ವರ್ಷದಲ್ಲಿ ಒಂದಿಷ್ಟುತಿಂಗಳ ಕಾಲ ಆಫ್ರಿಕಾದ ವಿವಿಧ ದೇಶಗಳಿಗೆ ಹೋಗಿ ಬರುವುದು ವಾಡಿಕೆ. ಇದು ಹಲವಾರು ದಶಕಗಳಿಂದಲೂ ನಡೆದು ಬಂದಿದೆ.
ಗಣರಾಜ್ಯೋತ್ಸವಕ್ಕೆ ಹಕ್ಕಿಪಿಕ್ಕಿ ಜನಾಂಗದ ದಂಪತಿ ಆಯ್ಕೆ
ನಮ್ಮನ್ನು ಸುರಕ್ಷಿತವಾಗಿ ಕರೆಸಿಕೊಳ್ಳಿ:
ನಾವು ವಾಸಿಸುತ್ತಿರುವ ಮನೆ ಇರುವ ಪ್ರದೇಶದ ಸುತ್ತಮುತ್ತ ಕ್ಷಿಪಣಿ ದಾಳಿ (Missile attack), ಬಾಂಬ್, ಗುಂಡಿನ ಸುರಿಮಳೆಯಾಗುತ್ತಿದೆ. ನಾವೆಲ್ಲರೂ 3-4 ದಿನದಿಂದ ಊಟ, ನೀರು, ಆಹಾರ ಇಲ್ಲದೆ ಪರದಾಡುತ್ತಿದ್ದೇವೆ. ಸೋಮವಾರ ದಾಳಿ ಒಂದಿಷ್ಟುಕಡಿಮೆಯಾಗಿದ್ದರಿಂದ ಪಕ್ಕದ ಮನೆಯವರಿಗೆ ಬೇಡಿ, ಕುಡಿಯಲು ನೀರು ತುಂಬಿಕೊಂಡಿದ್ದೇವೆ. ಸಮೀಪದಲ್ಲೇ ರಸ್ತೆ ಪಕ್ಕದಲ್ಲಿ ಬಯಲಿನಲ್ಲಿದ್ದ ಅಂಗಡಿಯೊಂದು ತೆಗೆದಿದ್ದರಿಂದ 3-4 ದಿನಕ್ಕಾಗುವಷ್ಟುಆಹಾರ ಧಾನ್ಯ, ನೀರಿನ ಬಾಟಲು, ಇತರೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದೇವೆ. ನಿನ್ನೆ ರಾತ್ರಿಯಿಂದಲೇ ನಮಗೆ ಊಟಕ್ಕೂ ಇರಲಿಲ್ಲ. ಇದ್ದ ಅಕ್ಕಿಯನ್ನೇ ಹಂಚಿಕೊಂಡು ಊಟ ಮಾಡಿ, ಮಲಗಿದ್ದೇವೆ. ಮಲಗಿದರೂ ನಿದ್ದೆ ಬಾರದ ಸ್ಥಿತಿ ಇಲ್ಲಿದೆ ಎಂದು ಅಲ್ಲಿಯ ಚಿತ್ರಣವನ್ನು ಕಟ್ಟಿಕೊಟ್ಟಿರುವ ಸಂತ್ರಸ್ತರು, ಇಡೀ ಊರಿಗೆ ಊರೇ ಸರ್ವನಾಶವಾಗಿದೆ. ನಮ್ಮ ನೆರವಿಗೆ ಪ್ರಧಾನಿ (Prime Minister), ಕೇಂದ್ರ ಗೃಹಮಂತ್ರಿ, ಮುಖ್ಯಮಂತ್ರಿಗಳು ಬಂದು ನಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸು ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಇವರೆಲ್ಲಾ ಅಲ್ಲಿಗೆ ಹೋಗಿದ್ದು ಏಕೆ?
ಆಯುರ್ವೇದ ಔಷಧ (Ayurveda), ಗಿಡಮೂಲಿಕೆ, ನಾಟಿ ಔಷಧ ಮಾರಾಟಕ್ಕೆ ಕರ್ನಾಟಕದ ಹಕ್ಕಿಪಿಕ್ಕಿ ಜನರು ವರ್ಷದಲ್ಲಿ ಒಂದಿಷ್ಟುತಿಂಗಳ ಆಫ್ರಿಕಾದ ವಿವಿಧ ದೇಶಗಳಲ್ಲಿ ನೆಲೆಯೂರುತ್ತಾರೆ. ಇದು ಹಲವಾರು ದಶಕಗಳಿಂದಲೂ ನಡೆದುಕೊಂಡು ಬಂದಿದೆ. ಈ ರೀತಿ ಹೋಗಿದ್ದಾಗ ಅಲ್ಲಿ ಹಿಂಸೆ ಆರಂಭವಾಗಿ ತೊಂದರೆಗೆ ಸಿಲುಕಿದ್ದಾರೆ.