ಅಮೆರಿಕದಲ್ಲಿ 3 ‘ಉಗ್ರ’ ದಾಳಿ: ಟ್ರಂಪ್ ಕಟ್ಟಡ ಬಳಿ ಮಸ್ಕ್ ಕಂಪನಿ ಕಾರಲ್ಲಿ ಸ್ಫೋಟ
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ ಮೂರು ‘ಉಗ್ರ’ ದಾಳಿಗಳು ನಡೆದಿದ್ದು, ದೇಶದ ಜನರನ್ನು ಬೆಚ್ಚಿ ಬೀಳಿಸಿದೆ.
ನ್ಯೂಯಾರ್ಕ್ (ಜ.03): ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ಅಮೆರಿಕದಲ್ಲಿ 24 ಗಂಟೆಗಳ ಅವಧಿಯಲ್ಲಿ ಮೂರು ‘ಉಗ್ರ’ ದಾಳಿಗಳು ನಡೆದಿದ್ದು, ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಅಕ್ರಮ ವಲಸೆಗಾರರ ವಿರುದ್ಧ ಕಠಿಣ ನಿಲುವು ಹೊಂದಿರುವ ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಸಜ್ಜಾಗಿರುವ ಹೊತ್ತಿನಲ್ಲೇ ನಡೆದ ಈ ದಾಳಿಗಳು ಆತಂಕದ ಜೊತೆಗೆ ಸಾಕಷ್ಟು ಅನುಮಾನಗಳನ್ನೂ ಹುಟ್ಟುಹಾಕಿವೆ. ಈ ಮೂರೂ ಘಟನೆಗಳ ಕುರಿತು ಎಫ್‌ಬಿಐ ತನಿಖೆ ಆರಂಭಿಸಿದ್ದು, ಇವುಗಳ ನಡುವೆ ಪರಸ್ಪರ ನಂಟು ಇದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದೆ.
ತ್ರಿವಳಿ ದಾಳಿ: ನ್ಯೂ ಓರ್ಲೀನ್ಸ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದವರ ಮೇಲೆ ಬುಧವಾರ ಮುಂಜಾನೆ ಐಸಿಸ್ ಉಗ್ರ ಶಂಸುದ್ದೀನ್ ಕಾರು ಹರಿಸಿದ್ದ ಘಟನೆಯಲ್ಲಿ ಒಟ್ಟು 15 ಜನರು ಸಾವನ್ನಪ್ಪಿದ್ದಾರೆ. ಸೇನೆಯ ಮಾಜಿ ಯೋಧ ಶಂಸುದ್ದೀನ್‌ನ ಈ ಕೃತ್ಯದ ಹಿಂದೆ ಇನ್ನಷ್ಟು ಜನರ ಕೈವಾಡದ ಶಂಕೆಯನ್ನು ಎಫ್‌ಬಿಐ ವ್ಯಕ್ತಪಡಿಸಿದೆ.
ಇನ್ನೊಂದೆಡೆ ಲಾಸ್ ವೇಗಾಸ್‌ನಲ್ಲಿ ಟ್ರಂಪ್ ಒಡೆತನದ ಹೋಟೆಲ್ ಬಳಿಯೇ, ಅವರ ಆಪ್ತ ಎಲಾನ್ ಮಸ್ಕ್‌ರ ಟೆಸ್ಲಾ ಕಂಪನಿಗೆ ಸೇರಿದ ಕಾರೊಂದನ್ನು ಸ್ಫೋಟಿಸಲಾಗಿದೆ. ಘಟನೆಯಲ್ಲಿ ಓರ್ವ ಬಲಿಯಾಗಿದ್ದು, 7 ಜನರು ಗಾಯಗೊಂಡಿದ್ದಾರೆ. ಬಾಡಿಗೆಗೆ ತಂದಿದ್ದ ಟೆಸ್ಲಾ ಸೈಬರ್ ಟ್ರಕ್ ಕಾರಿನಲ್ಲಿ ಸ್ಫೋಟಕಗಳನ್ನು ಇಟ್ಟು ಈ ದುಷ್ಕೃತ್ಯ ಎಸಗಲಾಗಿದೆ. ವಿಶೇಷವೆಂದರೆ ನ್ಯೂ ಓರ್ಲೀನ್ಸ್‌ನಲ್ಲಿ ದಾಳಿಗೆ ಬಳಸಿದ ಪಿಕಪ್ ಟ್ರಕ್ ಮತ್ತು ಲಾಸ್‌ವೇಗಾಸ್‌ನಲ್ಲಿ ಸ್ಫೋಟಕ್ಕೆ ಬಳಸಿದ ಸೈಬರ್ ಟ್ರಕ್ ಕಾರ್, ಎರಡನ್ನೂ ಟುರ್ರೋ ಕಂಪನಿಯಿಂದ ಬಾಡಿಗೆ ಪಡೆಯಲಾಗಿತ್ತು. ಜತೆಗೆ ಈ ಕಾರಿನಲ್ಲಿ ಬಲಿಯಾದ ವ್ಯಕ್ತಿ ಕೂಡ ಮಾಜಿ ಸೈನಿಕ. ಇದು, ಎರಡೂ ಘಟನೆ ನಡುವೆ ನಂಟಿದೆ ಮತ್ತು ಇದೊಂದು ಉಗ್ರ ಕೃತ್ಯ ಎನ್ನುವುದಕ್ಕೆ ಸಾಕ್ಷಿ ಎಂದು ಮಸ್ಕ್ ಹೇಳಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ಬೊರ್ಬನ್ ರಸ್ತೆಯಲ್ಲಿ ಉಗ್ರರ ದಾಳಿ, ಹಲವರು ಬಲಿ!
ನೈಟ್‌ಕ್ಲಬ್‌ನಲ್ಲಿ ಗುಂಡೇಟು: ಇನ್ನೊಂದೆಡೆ ನ್ಯೂಯಾರ್ಕ್‌ನ ಕ್ವೀನ್ಸ್ ರಸ್ತೆಯಲ್ಲಿರುವ ನೈಟ್‌ಕ್ಲಬ್‌ವೊಂದರ ಹೊರಗಡೆ ನಾಲ್ವರು ಪುರುಷರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 10 ಜನರು ಗಾಯಗೊಂಡಿದ್ದಾರೆ.