ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪ, 26/11 ರೂವಾರಿ ಲಖ್ವಿ ಬಂಧನ!
26/11 ರೂವಾರಿ ಲಖ್ವಿ ಬಂಧನ| ಉಗ್ರ ಚಟುವಟಿಕೆಗೆ ಹಣ ನೀಡಿದ ಆರೋಪ| ಪಾಕಿಸ್ತಾನ ಉಗ್ರ ನಿಗ್ರಹ ದಳದಿಂದ ಸೆರೆ
ಲಾಹೋರ್(ಜ.03): ಮುಂಬೈ ದಾಳಿ ರೂವಾರಿ, ಲಷ್ಕರ್ ಎ ತೊಯ್ಬಾ ಉನ್ನತ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನದಲ್ಲಿ ಶನಿವಾರ ಬಂಧಿಸಲಾಗಿದೆ. ಭಯೋತ್ಪಾದನೆಗೆ ಹಣ ನೀಡಿಕೆ ಆರೋಪ ಹೊರಿಸಿ ಆತನನ್ನು ಸೆರೆ ಹಿಡಿಯಲಾಗಿದೆ.
26/11 ಮುಂಬೈ ದಾಳಿ ಆರೋಪ ಈತನ ಮೇಲೆ ಕೇಳಿಬಂದ ಕಾರಣ ಈ ಮುನ್ನ ಈತ ಬಂಧನಕ್ಕೆ ಒಳಪಟ್ಟಿದ್ದರೂ 2015ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ. ಈಗ ಈತನನ್ನು ಪಂಜಾಬ್‌ನ ಭಯೋತ್ಪಾದಕ ನಿಗ್ರಹ ದಳ ಬಂಧಿಸಿದೆಯಾದರೂ, ಬಂಧನದ ಸ್ಥಳವನ್ನು ಬಹಿರಂಗಪಡಿಸಲು ನಿರಾಕರಿಸಿದೆ. ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.
‘ಲಖ್ವಿ ಔಷಧಾಲಯ ನಡೆಸುತ್ತಿದ್ದಾನೆ. ಈತ ಉಗ್ರ ಚಟುವಟಿಕೆಗೆ ಹಣಕಾಸು ನೆರವು ಒದಗಿಸಲು ನಿಧಿ ಸಂಗ್ರಹಿಸುತ್ತಿದ್ದಾನೆ ಎಂಬ ಆರೋಪವಿದೆ. ಔಷಧಾಲಯದಿಂದ ಹಣ ಸಂಗ್ರಹಿಸಿ ಅದನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಲಖ್ವಿ ಹಾಗೂ ಇತರರು ವಿನಿಯೋಗಿಸಿದ್ದಾರೆ. ವೈಯಕ್ತಿಕ ಖರ್ಚಿಗಾಗಿಯೂ ಈ ಹಣ ಬಳಸಿಕೊಂಡಿದ್ದಾನೆ. ಈ ಕುರಿತ ವಿಚಾರಣೆ ಲಾಹೋರ್ ಕೋರ್ಟ್‌ನಲ್ಲಿ ನಡೆಯಲಿದೆ’ ಎಂದು ಭಯೋತ್ಪಾದಕ ದಳ ಹೇಳಿದೆ.
ಇತ್ತೀಚೆಗೆ ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯು ಲಖ್ವಿಗೆ ತಿಂಗಳಿಗೆ 1.5 ಲಕ್ಷ ರು.ಗಳನ್ನು ಆತನ ಖಾತೆಯಿಂದ ಬಳಸಿಕೊಳ್ಳಲು ಒಪ್ಪಿಗೆ ನೀಡಿತ್ತು. ಈತ ವಿಶ್ವಸಂಸ್ಥೆಯ ನಿರ್ಬಂಧಿತ ಪಟ್ಟಿಯಲ್ಲಿರುವ ಉಗ್ರನಾದ ಕಾರಣ ಬ್ಯಾಂಕ್ ಖಾತೆಯಲ್ಲಿನ ಹಣ ಬಳಸಿಕೊಳ್ಳಲು ಸಮಿತಿಯ ಒಪ್ಪಿಗೆ ಅಗತ್ಯವಿತ್ತು. ವಿಶ್ವಸಂಸ್ಥೆ ನಿರ್ಧಾರ ಭಾರತವನ್ನು ಕೆರಳಿಸಿತ್ತು.
2015ಕ್ಕೂ ಮುನ್ನ ಲಖ್ವಿ ಪಾಕಿಸ್ತಾನ ಜೈಲಿನಲ್ಲಿದ್ದರೂ, ಆತನ ಜೈಲುವಾಸ ಪ್ರಹಸನದಂತಿತ್ತು. ಏಕೆಂದರೆ ಜೈಲಲ್ಲಿದ್ದಾಗಲೇ ಮಗುವಿಗೆ ತಂದೆಯಾಗಿದ್ದ!