ಇಸ್ಲಮಾಬಾದ್(ಜೂ.07): ಪಾಕಿಸ್ತಾನದಲ್ಲಿ ಸೋಮವಾರ ಮುಂಜಾನೆ 3.45ಕ್ಕೆ ಎರಡು ರೈಲುಗಳು ಡಿಕ್ಕಿಯಾದ ಪರಿಣಾಮ 32ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ದುರಂತದಲ್ಲಿ 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತದ ತೀವ್ರತೆ ಅದೆಷ್ಟಿತ್ತೆಂದರೆ, ರೈಲುಗಳು ಡಿಕ್ಕಿಯಾದ ರಭಸಕ್ಕೆ ಬೋಗಿಗಳು ಹಳಿ ತಪ್ಪಿ ಬಿದ್ದಿವೆ. ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ.

ಮಿಲ್ಲತ್ ಎಕ್ಸ್‌ಪ್ರೆಸ್ ಅಪಘಾತ, ಮತ್ತೊಂದು ರೈಲು ಡಿಕ್ಕಿ

ಪಾಕಿಸ್ತಾನದ ಮಾಧ್ಯಮಗಳನ್ವಯ ಘೋಟ್ಕಿ ಬಳಿಯ ರೆಟಿ ಮತ್ತು ದಹರ್ಕಿ ರೈಲು ನಿಲ್ದಾಣದ ನಡುವೆ ಈ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಮಿಲ್ಲತ್ ಎಕ್ಸ್‌ಪ್ರೆಸ್‌ನ ಕೆಲವು ಬೋಗಿಗಳು ಮತ್ತೊಂದು ಹಳಿಗೆ ಬಿದ್ದಿದ್ದವೆನ್ನಲಾಗಿದೆ. ಈ ಸಮಯದಲ್ಲೇ ಸರ್ ಸೈಯದ್ ಎಕ್ಸ್‌ಪ್ರೆಸ್ ಅದೇ ಹಳಿಯಲ್ಲಿ ಸಾಗಿದೆ ಹಾಗೂ ಹಳಿ ಮೇಲಿದ್ದ ಬೋಗಿಗಳಿಗೆ ಡಿಕ್ಕಿ ಹೊಡೆದು ಉರುಳಿದೆ. ಮಿಲ್ಲತ್ ಎಕ್ಸ್‌ಪ್ರೆಸ್ ಕರಾಚಿಯಿಂದ ಸರ್ಗೋಡಾಗೆ ಮತ್ತು ಸರ್ ಸೈಯದ್ ಎಕ್ಸ್‌ಪ್ರೆಸ್ ರಾವಲ್ಪಿಂಡಿಯಿಂದ ಕರಾಚಿಗೆ ಹೋಗುತ್ತಿತ್ತು.

ಬೋಗಿ ಕತ್ತರಿಸಿ ಶವ ಹೊರಕ್ಕೆ

ಈ ಅಪಘಾತದ ತೀವ್ರತೆಗೆ ಬೋಗಿಗಳು ನುಜ್ಜುಗುಜ್ಜಾಗಿದ್ದು, ಒಳಗೆ ಸಿಲುಕಿದ್ದ ಗಾಯಾಳು ಹಾಗೂ ಮೃತದೇಹಗಳನ್ನು ಹೊರತೆಗೆಯಲು ಕಟರ್ ಸಹಾಯದಿಂದ ಬೋಗಿಯನ್ನು ತುಂಡರಿಸಬೇಕಾಯ್ತು. ಹಳ್ಳಿಗಳಿಂದ ಟ್ರ್ಯಾಕ್ಟರ್‌ ತರಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತ ಸಂಭವಿಸಿದ ಸುಮಾರು 4-5 ಗಂಟೆ ಬಳಿಕವೇ ರಕ್ಷಣಾ ತಂಡ ಇಲ್ಲಿಗೆ ತಲುಪಿದೆ. ಈ ದುರಂತದಿಂದಾಗಿ ಅನೇಕ ರೈಲುಗಳು ರದ್ದಾಗಿವೆ.