ನವರಾತ್ರಿ ದಾಂಡಿಯಾ ನೃತ್ಯದ ನಂತರ ಆನ್ಲೈನ್ನಲ್ಲಿ ಖರೀದಿಸಿದ ಬಟ್ಟೆಗಳನ್ನು ಧರಿಸಿ ಹಿಂತಿರುಗಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಇ-ಕಾಮರ್ಸ್ ರಿಟರ್ನ್ ನೀತಿಗಳ ದುರುಪಯೋಗ ಮತ್ತು ನೈರ್ಮಲ್ಯದ ಬಗ್ಗೆ ಗ್ರಾಹಕರಲ್ಲಿ ತೀವ್ರ ಕಳವಳ ಮೂಡಿಸಿದೆ.
ಆನ್ಲೈನ್ ಷಾಪಿಂಗ್ ಮಾಡುವುದು ಎಂದರೆ ಹಲವರಿಗೆ ತುಂಬಾ ಇಷ್ಟ. ಅದರಲ್ಲಿಯೂ ಬಟ್ಟೆಗಳನ್ನು ತೆಗೆದುಕೊಳ್ಳುವವರ ದೊಡ್ಡ ದಂಡೇ ಇದೆ. ಇವರ ಪೈಕಿ ಕೆಲವರಿಗೆ ಒಂದು ರೀತಿ ಚಟ ಇದೆ. ಅದೇನೆಂದರೆ, ಬಟ್ಟೆ ಖರೀದಿಸೋದು. ಅದನ್ನು ಧರಿಸಿ ರೀಲ್ಸ್ ಮಾಡಿಯೋ, ಇಲ್ಲವೇ ಯಾವುದೋ ಫಂಕ್ಷನ್ಗೆ ಹಾಕಿಕೊಂಡೋ ಬಳಿಕ ಅದರ ಫಿಟ್ಟಿಂಗ್ ಸರಿಯಿಲ್ಲ ಎಂದೋ, ಬಣ್ಣ ಇಷ್ಟ ಆಗಲಿಲ್ಲ ಎಂದೋ... ಹೀಗೆ ಏನೇನೋ ನೆಪ ಹೇಳಿ ಅದನ್ನು ರಿಟರ್ನ್ ಮಾಡುತ್ತಾರೆ. ಅದನ್ನೇ ಬೇರೆಯವರು ಆನ್ಲೈನ್ನಲ್ಲಿ ತರಿಸಿಕೊಂಡು ಹಾಕಿಕೊಳ್ತಾರೆ. ಆದ್ದರಿಂದ ಆನ್ಲೈನ್ನಲ್ಲಿ ಬಟ್ಟೆ ಪರ್ಚೇಸ್ ಮಾಡುವಾಗ ಸ್ವಲ್ಪ ಯೋಚಿಸಿ ಖರೀದಿಸಿದರೆ ಉತ್ತಮ.
ವೈರಲ್ ವಿಡಿಯೋದಿಂದ ಬೇಸ್ತು ಬಿದ್ದ ಜನ
ಇದಕ್ಕೆ ಉದಾಹರಣೆಯಾಗಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ನವರಾತ್ರಿ ಸಮಯದಲ್ಲಿ ದಾಂಡಿಯಾ ನೃತ್ಯ ಫೇಮಸ್. ಉತ್ತರ ಭಾರತದ ಈ ನೃತ್ಯ ಈಗ ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲಿಯೂ ಮಾಡುವುದು ಇದೆ. ದಾಂಡಿಯಾ ನೃತ್ಯಕ್ಕೆ ವಿಶೇಷ ಉಡುಪು ಬೇಕಾಗುತ್ತದೆ. ಅದು ಮತ್ತೆ ಪ್ರಯೋಜನಕ್ಕೆ ಬರುವುದಿಲ್ಲ. ಆದ್ದರಿಂದಲೇ ಚಾಲಾಕಿ ಯುವತಿಯರು ಆನ್ಲೈನ್ನಲ್ಲಿ ದಾಂಡಿಯಾ ಬಟ್ಟೆ ತರಿಸುವುದು, ಡಾನ್ಸ್ ಮಾಡಿದ ಬಳಿಕ ಅದರ ಕೆಲಸ ಮುಗಿಯುವ ಕಾರಣದಿಂದ ಅದು ಸರಿಯಿಲ್ಲ ಎಂದುಕೊಂಡು ರಿಟರ್ನ್ ಮಾಡುತ್ತಿದ್ದಾರೆ. ಹೀಗೆ ಮಾಡಿರುವ ರಿಟರ್ನ್ ಪಾರ್ಸಲ್ನ ರಾಶಿ ರಾಶಿ ಬಟ್ಟೆಗಳನ್ನು ಆನ್ಲೈನ್ ವಿತರಣಾ ಏಜೆಂಟ್ ತೋರಿಸಿರುವ ವಿಡಿಯೋ ವೈರಲ್ ಆಗಿದೆ.
ದಾಂಡಿಯಾ ಖತಮ್, ಪಾರ್ಸೆಲ್ ರಿಟರ್ನ್"
"ದಾಂಡಿಯಾ ಖತಮ್, ಪಾರ್ಸೆಲ್ ರಿಟರ್ನ್" ಎಂಬ ಶೀರ್ಷಿಕೆಯ ವೀಡಿಯೊದಲ್ಲಿ, ದಾಂಡಿಯಾ ಹಬ್ಬಗಳು ಮುಗಿದ ನಂತರ ಬಟ್ಟೆಗಳನ್ನು ಹೇಗೆ ಹಿಂದಿರುಗಿಸಲಾಗಿದೆ ಎಂದು ವಿತರಣಾ ಏಜೆಂಟ್ ತೋರಿಸುತ್ತಿದ್ದಾರೆ. ಹಲವಾರು ಸಹ ವಿತರಣಾ ಏಜೆಂಟ್ಗಳು ಹಬ್ಬದ ಬಟ್ಟೆಗಳಿಗೆ ಇದೇ ರೀತಿಯ ರಿಟರ್ನ್ ಆರ್ಡರ್ಗಳನ್ನು ಸ್ವೀಕರಿಸಿರುವುದಾಗಿ ಕಮೆಂಟ್ಸ್ ಮಾಡಿದ್ದಾರೆ. ಬಟ್ಟೆಗಳ ರಾಶಿಯತ್ತ ಗಮನ ಸೆಳೆದ ಏಜೆಂಟ್, ಆಚರಣೆಗಳು ಮುಗಿದ ಬಳಿಕ ಹೇಗೆ ಗ್ರಾಹಕರು ತಮ್ಮ ದಾಂಡಿಯಾ ಬಟ್ಟೆಗಳನ್ನು ಹಿಂತಿರುಗಿಸುತ್ತಿರುವಂತೆ ಕಂಡುಬಂದಿದೆ ಎಂದು ತಿಳಿಸಿದರು. ಅವರು ಈ ಪ್ರವೃತ್ತಿಯನ್ನು ತಮಾಷೆಯೆಂದು ಬಣ್ಣಿಸಿದರು ಮತ್ತು ಈ ದೃಶ್ಯಗಳು ಇ-ಕಾಮರ್ಸ್ ರಿಟರ್ನ್ ನೀತಿಗಳ ದುರುಪಯೋಗದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿವೆ.
ಒಬ್ಬ ಬಳಕೆದಾರರು ಹಿಂದಿರುಗಿಸಿದ ಉಡುಪುಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಜನದಟ್ಟಣೆಯ ಹಬ್ಬದ ಕಾರ್ಯಕ್ರಮಗಳಲ್ಲಿ ಧರಿಸಿದ ಬಟ್ಟೆಗಳನ್ನು ಅಂತಿಮವಾಗಿ ಇತರ ಗ್ರಾಹಕರಿಗೆ ಮಾರಾಟ ಮಾಡಬಹುದೇ ಎಂದು ಪ್ರಶ್ನಿಸಿದ್ದಾರೆ. ಹಿಂದೆ ಬಟ್ಟೆಗಳನ್ನು ಬಳಸಿದಾಗ ಮಾರಾಟಗಾರರು ಬಹಿರಂಗಪಡಿಸಬೇಕು ಎಂದು ಬಳಕೆದಾರರು ವಾದಿಸಿದ್ದಾರೆ, ಸಂಭಾವ್ಯ ನೈರ್ಮಲ್ಯದ ಕಾಳಜಿಗಳ ಬಗ್ಗೆ ದನಿ ಎತ್ತಿದ್ದಾರೆ. ಕೆಲವರು ರಿಟರ್ನ್ ಮಾಡುವುದಿದ್ದರೆ ಅದಕ್ಕೆ ಟೈಂ ಲಿಮಿಡ್ ಹಾಕಬೇಕು ಎಂದು ವಾದಿಸುತ್ತಿದ್ದಾರೆ.


