ಪ್ರೇಮ ವಿಫಲವಾದ ಯುವಕನೊಬ್ಬ ಆರು ದಿನ ಕಾಡಿನಲ್ಲಿ ಅಲೆದಾಡಿದ ಘಟನೆ ಬೆಳಕಿಗೆ ಬಂದಿದೆ. ಆಹಾರ, ನೀರಿಲ್ಲದೆ 40 ಕಿ.ಮೀ. ನಡೆದುಕೊಂಡು, ಕಾಡು ಹಣ್ಣುಗಳನ್ನು ತಿಂದು ಬದುಕುಳಿದ ಯುವಕನ ಕಥೆ. ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಪತ್ತೆ ಹಚ್ಚಿದರು.

ಯೌವನ ಹಾಗೂ ವಯಸ್ಕ ಹಂತದಲ್ಲಿ ಪ್ರೀತಿ, ಪ್ರೇಮ ಹಾಗೂ ಪ್ರಣಯಗಳು ಆಗುವುದು ಸಹಜ ವಿಚಾರವಾಗಿದೆ. ಇನ್ನು ಪ್ರೀತಿಯಲ್ಲಿ ಬ್ರೇಕಪ್ ಆಗುವುದು ಸಾಮಾನ್ಯ ಆಗಿದ್ದರೂ, ಮೊದಲ ಪ್ರೀತಿಯಲ್ಲಿ ಬಿದ್ದವರು ಇದರಿಂದ ಹೊರಗೆ ಬರಲು ತೊಳಲಾಡುವುದು ಮಾತ್ರ ಭಾರೀ ಹಿಂಸೆಯಾಗಿರುತ್ತದೆ. ಅದೇ ರೀತಿ ಇಲ್ಲೊಬ್ಬ ಯುವಕ ತನಗೆ ಕೈಕೊಟ್ಟ ಹುಡುಗಿಯನ್ನು ಮರೆಯುವುದಕ್ಕಾಗಿ ತಮ್ಮ ಊರಿನ ಪಕ್ಕದಲ್ಲಿದ್ದ ಭಯಂಕರ ಕಾಡು ಪ್ರಾಣಿಗಳಿರುವ ದಟ್ಟ ಕಾಡಿನೊಳಗೆ ಹೋಗಿದ್ದಾನೆ. ಕಾಡಿನಲ್ಲಿ ಮಾನವ ಜಗತ್ತಿನ ಯಾವುದೇ ಸಂಪರ್ಕಕ್ಕೂ ಸಿಗದೇ 6 ದಿನಗಳ ಕಾಲ ಅಲೆದಾಡಿದ್ದಾನೆ. ಮುಂದೇನಾಯ್ತು ನೀವೇ ನೋಡಿ..

ಯಾರೇ ಆಗಲಿ ಪ್ರೇಮ ವಿಫಲವಾದಾಗ ನೋವು ತಪ್ಪಿದ್ದಲ್ಲ. ಕೆಲವರಿಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದನ್ನು ಭಾರತದಲ್ಲಿ ದೇವದಾಸನಿಗೆ ಹೋಲಿಕೆ ಮಾಡಲಾಗುತ್ತದೆ. ಉದ್ದನೆಯ ಗಡ್ಡ ಬಿಟ್ಟುಕೊಂಡು, ಹಳೆಯ ಬಟ್ಟೆಗಳನ್ನು ಧರಿಸಿಕೊಂಡು, ಮದ್ಯ ಅಥವಾ ಧೂಮಪಾನ ಸೇರಿದಂತೆ ಇತರೆ ಮಾದಕ ವಸ್ತುಗಳಿಗೆ ದಾಸನಾಗಿ ವಿಚಿತ್ರವಾಗಿ ಓಡಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಚೀನಾದ ಒಬ್ಬ ಯುವಕನ ತನಗೆ ಕೈಕೊಟ್ಟು ಹೋದ ಪ್ರೇಯಸಿಯನ್ನು ಮರೆಯಬೇಕೆಂದು ಕಾಡಿಗೆ ಹೋಗಿ ಅಲೆದಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ.

ಕಾಡಿನಲ್ಲಿ 6 ದಿನಗಳ ಕಾಲ ನೀರು, ಆಹಾರ, ಮೊಬೈಲ್ ಫೋನ್ ಇಲ್ಲದೆ ಅಲೆದಾಡಿದ್ದಾನೆ ಈ ಯುವಕ, ತನ್ನ ಮಾಜಿ ಗೆಳತಿಯನ್ನು ಮರೆಯಲು ಇನ್ನೂ ಏನಾದರೂ ಮಾಡಬೇಕಿತ್ತು ಎಂದು ಹೇಳಿಕೊಂಡಿದ್ದಾನೆ. ಇನ್ನು ಘಟನೆಯ ವಿವರಕ್ಕೆ ಬರುವುದಾದರೆ, ಜೂನ್ 20 ರಂದು ಕ್ಸಿಯಾವೊಲಿನ್ ಎಂಬ ಯುವಕ ತನ್ನ ಬಾಡಿಗೆ ಮನೆಯಿಂದ ಏಕಾಏಕಿ ಫೋನ್ ಹಾಗೂ ಇತರೆ ತನ್ನ ವೈಯಕ್ತಿಕ ಸಾಮಗ್ರಿಗಳನ್ನು ಬಿಟ್ಟು ಹೊರಗೆ ಹೋಗಿದ್ದಾನೆ. ಮರುದಿನ ಬೆಳಿಗ್ಗೆ ಒಂದು ಗಂಟೆಗೆ ದಲಾಂಗ್ ಪರ್ವತ ಪ್ರದೇಶಕ್ಕೆ ತಲುಪಿದ್ದಾನೆ.

ಕ್ಸಿಯಾವೊಲಿನ್‌ನ ತಮ್ಮ ಯುಹಾಂಗ್ ಜಿಲ್ಲಾ ಪೊಲೀಸರಿಗೆ ಕರೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿತು. ಕ್ಸಿಯಾವೊಲಿನ್ ನ ಮನೆ ಖಾಲಿಯಾಗಿದ್ದು, ಮೊಬೈಲ್ ಫೋನ್ ಸಿಕ್ಕಿದೆ. ಸಿಸಿಟಿವಿ ದೃಶ್ಯಗಳಲ್ಲಿ ಯುವಕ ಮನೆಯಿಂದ ಹೊರಗೆ ಹೋಗುವುದು ಕಂಡುಬಂದಿದೆ ಎಂದು ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾನೆ. ಯುಹಾಂಗ್ ಪೊಲೀಸರು ನೂರಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸ್ಥಳೀಯರನ್ನು ಹುಡುಕಾಟಕ್ಕೆ ನಿಯೋಜಿಸಿದರು. ಪೊಲೀಸ್ ನಾಯಿಗಳು, ಡ್ರೋನ್ ಗಳು ಮತ್ತು ಸೋನಾರ್ ಉಪಕರಣಗಳನ್ನು ಬಳಸಿದರೂ ಅವನನ್ನು ಹುಡುಕುವಲ್ಲಿ ಯಾವುದೇ ಪ್ರಯೋಜನವಾಗಲಿಲ್ಲ. ಯುವಕನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.

ಆದರೆ, ಜೂನ್ 26 ರಂದು ಪೊಲೀಸರಿಗೆ ಒಂದು ಮಹತ್ವದ ಸುಳಿವು ಸಿಕ್ಕಿತು. ಲಿನಾನ್ ಜಿಲ್ಲೆಯ ಉದ್ಯಾನವನದಲ್ಲಿನ ಕಣ್ಗಾವಲು ಕ್ಯಾಮೆರಾಗಳಲ್ಲಿ ಕ್ಸಿಯಾವೊಲಿನ್ ಕಾಣಿಸಿಕೊಂಡಿದ್ದನು. ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಮತ್ತು ಕ್ಸಿಯಾವೊಲಿನ್‌ನನ್ನು ಪತ್ತೆಹಚ್ಚಲಾಯಿತು. ಆತ ಪೊಲೀಸರಿಗೆ ಸಿಕ್ಕಿದ ನಂತರ, ತನ್ನ ದೂರವಾದ ಗೆಳತಿಯನ್ನು ಮರೆತು ಮನಸ್ಸನ್ನು ಶಾಂತಗೊಳಿಸಲು ಪರ್ವತವನ್ನು ಏರಲು ನಿರ್ಧರಿಸಿದ್ದಾಗಿ ಯುವಕ ಸ್ವತಃ ಪೊಲೀಸರಿಗೆ ತಿಳಿಸಿದ್ದಾನೆ. ಇದಕ್ಕಾಗಿ 40 ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾಗಿ ತಿಳಿಸಿದ್ದಾನೆ. ಕಾಡು ಹಣ್ಣುಗಳು ಮತ್ತು ಹೊಳೆಯ ನೀರನ್ನು ಕುಡಿದು ಬದುಕುಳಿದಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಇನ್ನು ಪೊಲೀಸರು ಯುವಕನನ್ನು ನಾವು ವಶಕ್ಕೆ ಪಡೆದಾಗ ಆತನ ಬಟ್ಟೆಗಳೆಲ್ಲ ಹರಿದಿದ್ದವು ಎಂದು ಹೇಳಿದ್ದಾರೆ.

ಮಾಜಿ ಗೆಳತಿಯನ್ನು ಮರೆಯಲು ಮತ್ತು ಮನಸ್ಸನ್ನು ಶಾಂತಗೊಳಿಸಲು ಪರ್ವತಕ್ಕೆ ಹೋಗಿದ್ದನು. ಅಪಾಯಕಾರಿ ಪರ್ವತ ಪ್ರದೇಶದಲ್ಲಿ, ಕ್ರೂರ ಪ್ರಾಣಿಗಳಿದ್ದರೂ ಅದನ್ನು ಲೆಕ್ಕಿಸದೇ ಕಾಲ್ನಡಿಗೆಯಲ್ಲಿ 40 ಕಿ.ಮೀ. ನಡೆದುಕೊಂಡು ಹೋಗಿದ್ದಾನೆ. ಮೊದಲ 3 ದಿನಗಳ ಕಾಲ ಅನ್ನ, ನೀರು ಏನನ್ನೂ ಸೇವಿಸದೇ ನಡಿಗೆಯಲ್ಲೇ ಸಾಗಿದ್ದಾನೆ. ದೇಹಕ್ಕಾದ ದಣಿವನ್ನು ಇನ್ನುಮುಂದೆ ತಡೆದುಕೊಳ್ಳಲು ಶಕ್ತಿ ಇಲ್ಲ ಎಂದು ತಿಳಿದಾಗ ಕಾಡಿನಲ್ಲಿರುವ ಹಣ್ಣುಗಳು ಮತ್ತು ಹಳ್ಳದ ನೀರು ಕುಡಿದು ಜೀವ ಉಳಿಸಿಕೊಂಡಿದ್ದಾನೆ.

ಕಾಡಿನ ಹಣ್ಣುಗಳ ಸೇವನೆಯಿಂದ ಆತನಿಗೆ ದೇಹದ ಆಯಾಸ ಕಡಿಮೆಯಾಗಿಲ್ಲ. ಜೊತೆಗೆ, ತಾನು ನೆಮ್ಮದಿಯಿಂದ ನಿದ್ದೆ ಮಾಡಿ ಮೂರ್ನಾಲ್ಕು ದಿನಗಳು ಕಳೆದಿದ್ದರಿಂದ ನಿತ್ರಾಣದ ಸ್ಥಿತಿಗೆ ತಲುಪಿದ್ದನು. ಹೀಗಾಗಿ, ತಾನು ಬದುಕಬೇಕೆಂದು ಕಾಡಂಚಿನ ಗ್ರಾಮಗಳತ್ತ ಹೋಗಿದ್ದಾನೆ. ಅಲ್ಲಿ ಮನೆಗಳಿಂದ ಭಿಕ್ಷೆ ಬೇಡಿ ಆಹಾರವನ್ನು ಸೇವಿಸಿ, ಕಾಡು ಪ್ರಾಣಿಗಳ ಭಯವಿಲ್ಲದೇ ಗ್ರಾಮದ ಮನೆಗಳ ಕಾಂಪೌಂಡ್ ಒಳಗಿನ ಜಗುಲಿಯಲ್ಲಿ ಮಲಗಿ ವಿಶ್ರಾಂತಿ ಪಡೆದಿದ್ದಾನೆ. ನಂತರ, ಪುನಃ ತನ್ನ ಕಾಲ್ನಡಿಗೆ ಸುತ್ತಾಟವನ್ನು ಮುಂದುವರೆಸಿದ್ದಾಗೆ. ಲಿನಾನ್ ಜಿಲ್ಲೆಯ ಉದ್ಯಾನದಲ್ಲಿ ಕಾಣಿಸಿಕೊಂಡಾಗ ಪೊಲೀಸರು ಆತನನ್ನು ವಶಕ್ಕೆ ಪಡೆದು ತಮ್ಮನಿಗೆ ಒಪ್ಪಿಸಿದ್ದಾರೆ. ಈ ಲವ್ ಫೇಲ್ಯೂರ್ ಯುವಕನ ಬಗ್ಗೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಪರ ಮತ್ತು ವಿರುದ್ಧ ಚರ್ಚೆಗಳು ನಡೆಯುತ್ತಿವೆ.