ವಿಜಯಪುರ(ಅ.19): ಮಹಾತ್ಮ ಗಾಂಧಿ ಕೊಲೆಯಲ್ಲಿ ಸಾವರ್ಕರ್‌ ಪಾತ್ರವಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಕೊಲೆಯಲ್ಲಿ ಸಾರ್ವಕರ ಪಾತ್ರವಿಲ್ಲ ಎಂಬುದನ್ನು ಅಂದಿನ ನ್ಯಾಯಾಲಯವೇ ತೀರ್ಪು ನೀಡಿದೆ. ಆದರೆ ಈ ಪ್ರಕರಣದಲ್ಲಿ ಸಾವರ್ಕರ್‌ ಪಾತ್ರವಿತ್ತು ಎಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ನೋಡಿದ್ದಾರೆಯೇ ಎಂದು ಪ್ರಶ್ನಿಸಿದ ಯತ್ನಾಳ, ಸಿದ್ದರಾಮಯ್ಯ ಎಲ್ಲವನ್ನೂ ತಿಳಿದುಕೊಂಡು ಮಾತನಾಡಬೇಕು ಎಂದಿದ್ದಾರೆ.

ಸಾವರ್ಕರ್‌ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಆಗಿ​ರದೆ ಅಸ್ಪೃಶ್ಯತೆ ವಿರುದ್ಧವೂ ಹೋರಾಟ ಮಾಡಿದ್ದರು. ಇಂಥ ಸ್ವಾತಂತ್ರ್ಯ ಹೋರಾಟಗಾರರಿಗೆ ಸಿದ್ದರಾಮಯ್ಯನವರ ಹೇಳಿಕೆಯಿಂದ ಅವಮಾನವಾಗಿದೆ. ಇದು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವಾಗಿದೆ ಎಂದರು.

ನೇತಾಜಿ ಸುಭಾಷಚಂದ್ರ ಬೋಸ್‌ ಈ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಗಾಂಧಿ ಅವರ ಮೊಂಡುತನ ಹಾಗೂ ಗಾಂಧಿಯವರಿಗೆ ನೆಹರೂ ಮೇಲಿನ ಪ್ರೀತಿಯಿಂದಾಗಿ ಸುಭಾಷಚಂದ್ರ ಬೋಸ್‌ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಆಜಾದ್‌ ಹಿಂದ್‌ ಫೌಜ್‌ ಕಟ್ಟಿದರು. ಇಂಥ ಇತಿಹಾಸ ಮುಚ್ಚಿಡಲಾಗಿದೆ. ಅಷ್ಟೇಯಲ್ಲ. ಶಿವಾಜಿ ಮಹಾರಾಜರು ಸೇರಿದಂತೆ ಇತರೆ ಮಹಾನ್‌ ವ್ಯಕ್ತಿಗಳ ಇತಿಹಾಸ ಮುಚ್ಚಿಟ್ಟು, ಕೇವಲ ನೆಹರೂ ಮನೆತನದವರನ್ನು ವೈಭವೀಕರಣ ಮಾಡಲಾಗಿದೆ. ಕಮ್ಯುನಿಸ್ಟರು ಇತಿಹಾಸ ತಿರುಚಿದ್ದಾರೆ ಎಂದರು. ಕಾಂಗ್ರೆಸ್‌ನ ಕೆಟ್ಟ ಸಂಸ್ಕೃತಿ ಈ ದೇಶವನ್ನು ಹಾಳು ಮಾಡಿದೆ ಎಂದು ಆರೋ​ಪಿ​ಸಿ​ದರು.