ವಿಜಯಪುರ(ಅ.11): ನಗರದ ವಿವಿಧ ಸ್ಲಂ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ನಗರ ಸ್ಲಂ ಅಭಿವೃದ್ಧಿ ಸಮಿತಿ, ಅನೌಪಚಾರಿಕ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಸ್ಲಂ ಅಭಿವೃದ್ಧಿಪರ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ ವೃತ್ತದಿಂದ ಆರಂಭವಾದ ಪ್ರತಿಭಟನೆ ರಾರ‍ಯಲಿ ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಕಾಮಗಾರಿ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಘೋಷಣೆ ಕೂಗಿದರು. ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಧರಣಿ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮಾತನಾಡಿದ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟದ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಅವರು, ವಿಜಯಪುರದ ನಗರದ ಸ್ಲಂ ಬಡಾವಣೆಗಳಲ್ಲಿ ಅಭಿವೃದ್ಧಿ ಸಂಪೂರ್ಣ ವಂಚಿತವಾಗಿದೆ. ಅಲ್ಲಿ ನಡೆಯುತ್ತಿರುವ ಕಾಮಗಾರಿಗಳು ಸಹ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿವೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮನೆಗಳ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿದೆ. ಈ ಎಲ್ಲವೂ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾ. ಬಾಲರಾಜ ಮಾತನಾಡಿ, ವಿವಿಧ ವಸತಿ ಯೋಜನೆಗಳಡಿ ನಿರ್ಮಾಣಗೊಂಡಿರುವ ಮನೆಗಳು ಈಗಾಗಲೇ ಮಳೆಯಿಂದಾಗಿ ಸೋರುತ್ತಿವೆ. ಶಿಖಾರಖಾನೆಯ ಭಾಗದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ 29 ಮನೆಗಳ ಚಾವಣಿಯಲ್ಲಿ ನೀರು ಸೋರುತ್ತಿದೆ. ಇದೇ ಈ ರೀತಿಯಾದರೆ ಭವಿಷ್ಯದಲ್ಲಿ ನಿರ್ಮಾಣವಾಗುವ ಸಾವಿರಾರು ಆಶ್ರಯ ಮನೆಗಳ ಗತಿಯೇನು ಎಂದು ಪ್ರಶ್ನಿಸಿದರು.

ಹಕ್ಕೊತ್ತಾಯ:

ನಗರದ ಸ್ಲಂಗಳಲ್ಲಿ ನಡೆದಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮನೆಗಳ ಕಾಮಗಾರಿ ಕಳಪೆಮಟ್ಟದಾಗಿದ್ದು, ಈಗ ನಿರ್ಮಿತ ಮನೆಗಳ ಸಾಮಾಜಿಕ ಸಮೀಕ್ಷೆ ಮಾಡಬೇಕು, ಮನೆಗಳ ನಿರ್ಮಾಣಕ್ಕಾಗಿ ಸ್ಲಂ ಜನರು ಡಿಡಿ ಮುಖಾಂತರ ಮಂಡಳಿಗೆ ಹಣ ಸಂದಾಯ ಮಾಡಿರುವರು ಬೇಗನೆ ಮನೆ ನಿರ್ಮಾಣ ಕೆಲಸ ಪ್ರಾರಂಭವಾಗಬೇಕು, ಎರಡನೆ ಹಂತದಲ್ಲಿ 2500 ಮನೆಗಳ ನಿರ್ಮಾಣಕ್ಕೆ ಮಂಜೂರಾಗಿದ್ದು, ಕೂಡಲೇ ಟೆಂಡರ್‌ ಪಾಸ್‌ ಮಾಡಿಸಬೇಕು, ಭೂ ಮಾಪಣಾಧಿಕಾರಿಗಳಿಂದ ಭೂ ಸರ್ವೆ ಕೂಡಲೇ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಕ್ಕೊತ್ತಾಯ ಮಂಡಿಸಲಾಯಿತು.

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಕೊಳಗೇರಿ ಅಭಿವೃದ್ಧಿ ಮಂಡಳಿ ಅಭಿಯಂತರ ಸಸಾಲಟ್ಟಿ, ಪ್ರತಿ 15 ದಿನಗಳಿಗೊಮ್ಮೆ ಕಾಮಗಾರಿಯ ಗುಣಮಟ್ಟ ಮೊದಲಾದವುಗಳನ್ನು ಪರಿಶೀಲಿಸ​ಲಾ​ಗು​ವು​ದು​ ಎಂದು ಭರವಸೆ ನೀಡಿದ ನಂತರ ಧರಣಿ ಹಿಂಪಡೆಯಲಾಯಿತು.

ಶೋಭಾ ಗಾಯಕವಾಡ, ರಫಿಕ ಮನಗೂಳಿ, ರಾಜೇಸಾಬ ಸುತಾರ, ಕೃಷ್ಣ ಜಾಧವ, ಅಬ್ದುಲ್‌ ರಜಾಕ ತುರ್ಕಿ, ಮೀನಾಕ್ಷಿ ಕಾಲೆಬಾಗ, ರಮೇಶ, ಲಾಲಬಿ ಜಾತಗಾರ, ಪುಪ್ಪಾ ನೇಗಿನಾಳ, ಶಾಂತಾ ಗೊಲ್ಲರ, ಅಶೋಕ, ಶರಣು ಮುಂತಾದವರು ಇದ್ದರು.