ಬಸವನಬಾಗೇವಾಡಿಯಲ್ಲಿ ಭಾರೀ ಮಳೆ: ನೀರು ಪಾಲಾದ ಬೆಳೆ
ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಉತ್ತಮ ಮಳೆ| ಶನಿವಾರ ನಸುಕಿನ ಜಾವ ಎರಡು ಗಂಟೆಗೂ ಹೆಚ್ಚು ಕಾಲ ರಭಸವಾದ ಸುರಿದಿದೆ| ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿತು| ಬೆಳೆಗಳು ನೀರಿನಲ್ಲಿ ನಿಂತುಕೊಂಡಿವೆ| ಕೆಲವೆಡೆ ಹಳ್ಳಗಳು ತುಂಬಿ ಹರಿದಿವೆ| ಬೆಳೆ ಸರಿಯಾಗಿ ಬರುವ ಸಾಧ್ಯತೆ ಕಡಿಮೆ|
ಬಸವನಬಾಗೇವಾಡಿ(ಅ.20): ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶನಿವಾರ ಉತ್ತಮ ಮಳೆಯಾಗಿದೆ. ಪಟ್ಟಣ ಸೇರಿದಂತೆ ಮನಗೂಳಿ, ಹೂವಿನಹಿಪ್ಪರಗಿ, ರಬಿನಾಳ, ಇಂಗಳೇಶ್ವರ, ಮುತ್ತಗಿ, ಕಾನ್ನಾಳ ವಿವಿಧೆಡೆ ಶುಕ್ರವಾರ ಸಂಜೆ ಆರಂಭವಾದ ಮಳೆ ಕೆಲ ಹೊತ್ತು ಸುರಿಯಿತು. ಮತ್ತೆ ರಾತ್ರಿ 9 ರ ಸುಮಾರಿಗೆ ಆರಂಭವಾದ ಮಳೆ ಕೆಲ ಹೊತ್ತು ಜಿಟಿ ಜಿಟಿಯಾಗಿ, ಶನಿವಾರ ನಸುಕಿನ ಜಾವ ಎರಡು ಗಂಟೆಗೂ ಹೆಚ್ಚು ಕಾಲ ರಭಸವಾದ ಸುರಿದಿದೆ.
ಇದರಿಂದ ಹೊಲಗದ್ದೆಗಳಲ್ಲಿ ನೀರು ತುಂಬಿಕೊಂಡಿತು. ಬೆಳೆಗಳು ನೀರಿನಲ್ಲಿ ನಿಂತುಕೊಂಡಿವೆ. ಕೆಲವೆಡೆ ಹಳ್ಳಗಳು ತುಂಬಿ ಹರಿದಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಗಾಗ ಸುರಿದ ಅಲ್ಪಸ್ವಲ್ಪ ಮಳೆಯಿಂದಾಗಿ ತೊಗರಿ ಬಿತ್ತಲಾಗಿದೆ. ಅಲ್ಪಸ್ವಲ್ಪ ಮಳೆ ಬಂದ ಹಿನ್ನೆಲೆಯಲ್ಲಿ ತೆಗ್ಗು ಪ್ರದೇಶದಲ್ಲಿ ಬೆಳೆ ನಾಟಿತ್ತು. ಎತ್ತರದ ಪ್ರದೇಶದಲ್ಲಿ ಸರಿಯಾಗಿ ನಾಟಿಕೆ ಆಗಿರಲಿಲ್ಲ. ಕಳೆದ ಕೆಲ ದಿನಗಳಿಂದ ಆಗಾಗ ಮಳೆ ಸುರಿಯುತ್ತಿದ್ದರಿಂದ ತೇವಾಂಶದಿಂದಾಗಿ ತೆಗ್ಗಾದ ಪ್ರದೇಶದ ಬೆಳೆ ನಾಶವಾಗುತ್ತಿದೆ. ಎತ್ತರದ ಪ್ರದೇಶದಲ್ಲಿ ಸರಿಯಾಗಿ ನಾಟಿಕೆಯಾಗದ ಬೆಳೆಯು ಬೆಳೆಯುತ್ತಿದೆ. ಇದರಿಂದಾಗಿ ಬೆಳೆ ಸರಿಯಾಗಿ ಬರುವ ಸಾಧ್ಯತೆ ಕಡಿಮೆಯಾಗುವ ಆತಂಕವಿದೆ. ಶನಿವಾರ ನಸುಕಿನ ಜಾವ ಸುರಿದ ಮಳೆ ಜೋರಾಗಿತ್ತು. ಕೆಲ ಜಮೀನುಗಳÜಲ್ಲಿ ನೀರು ಬಸಿಯುತ್ತಿದೆ. ಇಂದು ಸುರಿದ ಮಳೆಯಿಂದಾಗಿ ಬೋರವೆಲ್, ಬಾವಿಗಳಿಗೆ ಅಲ್ಪಮಟ್ಟಿಗೆ ನೀರು ಬಂದಂತಾಗಿದೆ ಎಂದು ಬಸವನಹಟ್ಟಿಯ ರೈತ ಎನ್.ಬಿ.ಶಹಾಪುರ ಹೇಳಿದರು.
ತಾಲೂಕಿನ ವಿವಿಧೆ ಮಳೆ ಮಾಪನ ಕೇಂದ್ರದಲ್ಲಿ ಶನಿವಾರ ದಾಖಲಾದ ಮಳೆಯ ಪ್ರಮಾಣ: ಬಸವನಬಾಗೇವಾಡಿ ಕೇಂದ್ರದಲ್ಲಿ 69.9 ಎಂಎಂ, ಮನಗೂಳಿ ಕೇಂದ್ರದಲ್ಲಿ 102 ಎಂಎಂ, ಆಲಮಟ್ಟಿಕೇಂದ್ರದಲ್ಲಿ 43.5 ಎಂಎಂ, ಹೂವಿನಹಿಪ್ಪರಗಿ ಕೇಂದ್ರದಲ್ಲಿ 43.6 ಎಂಎಂ, ಆರೇಶಂಕರ ಕೇಂದ್ರದಲ್ಲಿ 62.4 ಎಂಎಂ, ಮಟ್ಟಿಹಾಳ ಕೇಂದ್ರದಲ್ಲಿ 53.4 ಎಂಎಂ ಮಳೆ ಪ್ರಮಾಣ ದಾಖಲಾಗಿದೆ.