ಬಸವನಬಾಗೇವಾಡಿ: ಗಗನಕ್ಕೇರಿದ ಬೆಳ್ಳುಳ್ಳಿ ಬೆಲೆ, ಗ್ರಾಹಕರ ಜೇಬಿಗೆ ಕತ್ತರಿ

ಪ್ರತಿ ಕ್ವಿಂಟಾಲ್‌ಗೆ 2500-3000 ಇದ್ದದ್ದು, 13000-18000ಕ್ಕೆ ಏರಿಕೆ|ದರ ಕಡಿಮೆಯಾದರೆ ಬೀಜಕ್ಕೆ ಹಾಕಿದ ಹಣ ಸಹ ಬಾರದೇ ರೈತರು ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕ| ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಬಳ್ಳೊಳ್ಳಿ ಬೀಜ ಸಿಗುತ್ತಿಲ್ಲ| ಗದಗ, ಹಾವೇರಿ ಜಿಲ್ಲೆಯ ಬಳ್ಳೊಳ್ಳಿ ಬೀಜಕ್ಕೆ ಬಲು ಬೇಡಿಕೆ| 

Garlic Price Rise in Basavanabagevadi in Vijayapura District

ಬಸವರಾಜ ನಂದಿಹಾಳ

ಬಸವನಬಾಗೇವಾಡಿ[ಅ.24]: ಮಾರುಕಟ್ಟೆಯಲ್ಲಿ ಇದುವರೆಗೂ ಈರುಳ್ಳಿಗೆ ಬಂಗಾರದ ಬೆಲೆ ಬಂದು ಇದೀಗ ಕೊಂಚ ಕಡಿಮೆಯಾಗಿದೆ. ಈಗ ಬೆಳ್ಳುಳ್ಳಿಗೆ ಬಂಗಾರದ ಧಾರಣೆ ಬಂದಿದೆ. ಹೀಗಾಗಿ ಖರೀದಿದಾರಿಗೆ ಬಿಸಿ ಮುಟ್ಟುವ ಜತೆ ಬೆಳ್ಳುಳ್ಳಿ ಬೀಜ ಖರೀ​ದಿ​ಸುವ ರೈತರಿಗೂ ಬಿಸಿ ಮುಟ್ಟಿಸಿದೆ.

ಕಳೆದ ವರ್ಷ ಈ ಅವಧಿಯಲ್ಲಿ ಬೆಳ್ಳುಳ್ಳಿಗೆ ಪ್ರತಿ ಕ್ವಿಂಟಾಲ್‌ಗೆ 2500-3000 ಧಾರಣೆಯಿತ್ತು. ಈ ವರ್ಷ 13000-18000 ಪ್ರತಿ ಕ್ವಿಂಟಾಲ್‌ಗೆ ಧಾರಣೆ ಇದೆ. ಬೆಳ್ಳುಳ್ಳಿ ಬೆಳೆ ಬೆಳೆಯುವ ರೈತರಿಗೆ ಈ ಬೆಲೆಯಿಂದಾಗಿ ಬೆಳ್ಳುಳ್ಳಿ ಹಾಕುವುದಕ್ಕೆ ಆಲೋಚನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಈ ದರದಲ್ಲಿ ಬೀಜ ಖರೀದಿಸಿ ಜಮೀನಿನಲ್ಲಿ ಬೆಳ್ಳು​ಳ್ಳಿ ಹಾಕಿದರೆ ಮುಂದೆ ಇದೇ ಧಾರಣೆ ಇದ್ದರೆ ಲಾಭವಾಗುತ್ತದೆ. ಒಂದು ವೇಳೆ 12000 ಧಾರಣೆ ಬಂದರೆ ಲಾಭ. ದರ ಕಡಿಮೆಯಾದರೆ ಬೀಜಕ್ಕೆ ಹಾಕಿದ ಹಣ ಸಹ ಬಾರದೇ ರೈತರು ಕಷ್ಟ ಅನುಭವಿಸಬೇಕಾಗುತ್ತದೆ ಎಂಬ ಆತಂಕ ಎದು​ರಾ​ಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಬಳ್ಳೊಳ್ಳಿ ಬೀಜ ಸಿಗುತ್ತಿಲ್ಲ. ಗದಗ, ಹಾವೇರಿ ಜಿಲ್ಲೆಯ ಬಳ್ಳೊಳ್ಳಿ ಬೀಜಕ್ಕೆ ಬಲು ಬೇಡಿಕೆ. ಈ ಬಾರಿ ಅಲ್ಲಿ ಮಳೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಸರಿಯಾಗಿ ಬೆಳೆದಿಲ್ಲ. ಇದರಿಂದಾಗಿ ಬೀಜ ಅಷ್ಟಾಗಿ ಬೆಳೆದಿಲ್ಲ. ಇದುವೇ ಬೆಳ್ಳುಳ್ಳಿ ಧಾರಣೆ ಗಗನಕ್ಕೇರಲು ಪ್ರಮುಖ ಕಾರಣವಾಗಿದೆ.

ತಾಲೂಕಿನ ಹೂವಿನಹಿಪ್ಪರಗಿ, ಅಗಸಬಾಳ, ನರಸಲಗಿ, ಕಣಕಾಲ, ಕಾನ್ನಾಳ, ಕರಭಂಟನಾಳ ಭಾಗದಲ್ಲಿ ರೈತರು ಹೆಚ್ಚಾಗಿ ಬೆಳ್ಳುಳ್ಳಿ ಬೆಳೆಯುತ್ತಾರೆ. ಈ ಸಲ ಧಾರಣೆ ಹೆಚ್ಚಾಗಿದ್ದರಿಂದ ಬೆಳ್ಳುಳ್ಳಿ ಬಿತ್ತು​ವ ಸಾಧ್ಯತೆ ಕಡಿಮೆಯಾಗಲಿದೆ. ಬೆಳ್ಳುಳ್ಳಿ ಬೀಜ ತರಲು ಗದಗ ಜಿಲ್ಲೆ ರೈತರು ಅಲೆದಾಡುತ್ತಿದ್ದಾರೆ.

ಈ ಸಲ ಬೆಳ್ಳುಳ್ಳಿ ದರ ಬಹಳವಾಗಿದೆ. ನಾನು ಈ ವರ್ಷ 6 ಕ್ವಿಂಟಾಲ್‌ ಬೆಳ್ಳುಳ್ಳಿ ಬೀಜ ಗದಗದಿಂದ ತಂದಿ​ದ್ದೇ​ನೆ. ಮಳೆಯಿಂದಾಗಿ ಇನ್ನೂ ಹಸಿ ಪ್ರಮಾಣ ಇರುವುದರಿಂದಾಗಿ ಬೆಳ್ಳುಳ್ಳಿ ಹಾಕಲು ಸಾಧ್ಯವಾಗುತ್ತಿಲ್ಲ. ಹಸಿ ಆರಿದ ಕೂಡಲೆ ಬೆಳ್ಳುಳ್ಳಿ ಹಾಕುವೆ. ಈ ಭಾಗದ ಅಗಸಬಾಳ ಭಾಗದಲ್ಲಿ ಸುಮಾರು 50-60 ಎಕರೆ ಪ್ರದೇಶದಲ್ಲಿ ಬೆಳ್ಳುಳ್ಳಿ ಹಾಕುತ್ತಾರೆ. ಇಷ್ಟುದರದಲ್ಲಿ ನಾವು ಖರೀದಿಸಿ ಬೆಳ್ಳುಳ್ಳಿ ಹಾಕುತ್ತೇವೆ. ನಮ್ಮ ಫಸಲು ಜನವರಿ ತಿಂಗಳಲ್ಲಿ ಬರುತ್ತದೆ. ಆಗ ಬೆಳ್ಳುಳ್ಳಿ ಬೆಲೆ ಇದೇ ರೀತಿ ಇದ್ದರೆ ನಮಗೆ ಅನುಕೂಲವಾಗುತ್ತದೆ ಎಂದು ಹೂವಿನಹಿಪ್ಪರಗಿಯ ರೈತ ಶಿವಣ್ಣ ಗುಂಡನ್ನವರ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಅಧಿಕಾರಿ ಸಿ.ಬಿ. ಪಾಟೀಲ ಅವರು, ಈ ಭಾಗದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳ್ಳುಳ್ಳಿಯನ್ನು ರೈತರು ತಮ್ಮ ಜಮೀನುಗಳಲ್ಲಿ ಬಿತ್ತು​ತ್ತಾರೆ. ತಾಲೂಕಿನಲ್ಲಿ 5-6 ಗ್ರಾಮಗಳಲ್ಲಿ ಮಾತ್ರ ಈ ಬೆಳೆ ಕಂಡುಬರುತ್ತದೆ. ಅಂದಾಜು 50-100 ಹೆಕ್ಟೇರ್‌ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತದೆ. ಮಳೆ ಹೆಚ್ಚಾದರೆ ಈ ಬೆಳೆ ಕೊಳೆಯುತ್ತದೆ. ಕೀಟಬಾಧೆ ಆದಾಗ ರೈತರು ಕೀಟನಾಶಕ ಸಿಂಪಡಣೆ ಮಾಡುವ ಮೂಲಕ ಬೆಳೆ ಸಂರಕ್ಷಣೆ ಮಾಡುತ್ತಾರೆ. ಈಗಾಗಲೇ ಮುಂಗಾರು ಸರ್ವೆ ಆಗಿದೆ. ಮುಂದಿನ ತಿಂಗಳು ಹಿಂಗಾರು ಸರ್ವೆ ಮಾಡಲಾಗುತ್ತದೆ. ಆಗ ನಮಗೆ ನಿಖರವಾದ ಮಾಹಿತಿ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios