ಕಾಂಗ್ರೆಸ್ ಗೆಲುವು ನೋಡಲಾಗದೇ ಟಿವಿ ಒಡೆದು ಹಾಕಿದ ಬಿಜೆಪಿ ಕಾರ್ಯಕರ್ತ!
ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ಉಪಚುನಾವಣೆಗಳಲ್ಲಿ ಬಿಜೆಪಿ ಸೋಲಿನಿಂದ ಕೋಪಗೊಂಡ ವಿಜಯಪುರ ಜಿಲ್ಲೆಯ ಬಿಜೆಪಿ ಕಾರ್ಯಕರ್ತನೊಬ್ಬ ತನ್ನ ಮನೆಯ ಟಿವಿಯನ್ನು ಒಡೆದು ಹಾಕಿದ್ದಾನೆ. ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿನ ಕೊರತೆಯೇ ಸೋಲಿಗೆ ಕಾರಣ ಎಂದು ಆರೋಪಿಸಿದ್ದಾನೆ.
ವಿಜಯಪುರ (ನ.23): ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ಉಪ ಚುನಾವಣಾ ಫಲಿತಾಂಶದಲ್ಲಿ ಮತ ಎಣಿಕೆ ಭರದಿಂದ ಸಾಗುತ್ತಿದ್ದ ವೇಳೆ ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನತ್ತ ಸಾಗಿದ್ದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದನ್ನು ನೋಡಲಾಗದೇ ಬಿಜೆಪಿ ಕಾರ್ಯಕರ್ತನೊಬ್ಬ ತನ್ನ ಮನೆಯಲ್ಲಿದ್ದ ಟಿವಿಯನ್ನು ಒಡೆದು ಹಾಕಿದ್ದಾನೆ.
ಹೌದು, ಈ ಹಿಂದೆ ಚುನಾವಣಾ ಫಲಿತಾಂಶದಲ್ಲಿ ಟಿವಿ ಹಾಗೂ ರೇಡಿಯೋಗಳನ್ನು ಒಡೆದು ಹಾಕುವ ಘಟನೆಗಳು ನಡೆಯುತ್ತಿದ್ದವು. ಇತ್ತೀಚೆಗೆ ಅಲ್ಲಿ ಯಾರೋ ಸ್ಪರ್ಧೆ ಮಾಡಿ ಸೋಲು, ಗೆಲುವು ಅನುಭವಿಸಿದರೆ ನಾವ್ಯಾಕೆ ಇಲ್ಲಿ ಕೋಪ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಂಡು ಸುಮ್ಮನಾಗಿದ್ದರು. ಆದರೆ, ಇಲ್ಲೊಬ್ಬ ಬಿಜೆಪಿ ಕಾರ್ಯಕರ್ತ ತನ್ನದಲ್ಲದ ಕ್ಷೇತ್ರದ ಅದರಲ್ಲಿಯೂ ತನ್ನ ಜಿಲ್ಲೆಯಲ್ಲಿ ಇಲ್ಲದ ಬಿಜೆಪಿ ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ಸೋಲುವುದನ್ನು ನೋಡಲಾಗದೇ ಟಿವಿ ಒಡೆದು ಹಾಕಿದ್ದಾರೆ.
ಇದನ್ನೂ ಓದಿ: ಸುಳ್ಳಾಯ್ತು ಎಕ್ಸಿಟ್ ಪೋಲ್ ಭವಿಷ್ಯ; ಮೂರಕ್ಕೆ ಮೂರು ಕ್ಷೇತ್ರ ಗೆದ್ದ ಕಾಂಗ್ರೆಸ್ ಗ್ಯಾರಂಟಿ!
ಇಂದು ಬೆಳಗ್ಗೆ ಮನೆಯಲ್ಲಿ ಉಪ ಚುನಾವಣೆಯ ಸುದ್ದಿ ಬಿತ್ತರಿಸುತ್ತಿದ್ದ ನ್ಯೂಸ್ ನೋಡುತ್ತಿದ್ದ ವೇಳೆ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿಯ ನಿಖಿಲ್ ಕುಮಾರಸ್ವಾಮಿ ಹಾಗೂ ಶಿಗ್ಗಾವಿಯ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದರು. ಆದರೆ, ಮಧ್ಯಾಹ್ನ 12 ಗಂಟೆ ವೇಳೆಗೆ ಎಂಟರಿಂದ 10ನೇ ಸುತ್ತಿನ ಮತ ಎಣಿಕೆಯಿಂದ ಇವರು ಹಿನ್ನಡೆ ಅಣುಭವಿಸಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದರು. ಮೂರಕ್ಕೆ ಮುರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ ಬೆನ್ನಲ್ಲಿಯೇ ತಾವು ನೋಡುತ್ತಿದ್ದ ಟಿವಿಯ ಮೇಲೆ ಪಕ್ಕದಲ್ಲಿದ್ದ ಚೇರ್ ತೆಗೆದುಕೊಂಡು ಎಸೆದಿದ್ದಾರೆ. ಜೊತೆಗೆ, ಟಿವಿಯನ್ನು ತೆಗೆದುಕೊಂಡು ಬಂದು ಮನೆಯ ಅಂಗಳದಲ್ಲಿ ಎಸೆದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಮೂರನೇ ತಲೆಮಾರಿಗೆ ರಾಮನಗರದಿಂದ ಜೆಡಿಎಸ್ ವಾಶ್‌ಔಟ್; ನಿಖಿಲ್ ಕುಮಾರಸ್ವಾಮಿಗೆ ಹ್ಯಾಟ್ರಿಕ್ ಸೋಲು!
ಈ ಘಟನೆ ವಿಜಯಪುರ ಜಿಲ್ಲೆ ಕೋಲ್ಹಾರ ಪಟ್ಟಣದಲ್ಲಿ ನಡೆದಿದೆ. ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ವೀರಭದ್ರಪ್ಪ ಭಾಗಿ ಟಿವಿ ಒಡೆದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿ ಆಗಿದ್ದಾರೆ. ಬಿಜೆಪಿ ಸೋಲುವುದನ್ನು ನೋಡಲಾಗದೇ ತಮ್ಮ ಮನೆಯಲ್ಲಿನ ಟಿವಿ ಒಡೆದುಹಾಕಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲದೇ ಭಿನ್ನಮತ ಇರುವುದಕ್ಕೆ ಇಲ್ಲಿ ಸೋಲಾಗಿದೆ. ಬಿಜೆಪಿ ನಾಯಕರಲ್ಲಿ ಒಗ್ಗಟಿನ ಕೊರತೆಯಿಂದ ಹೀನಾಯ ಸೋಲಿಗೆ ಕಾರಣ ಎಂದು ಕಾರ್ಯಕರ್ತ ವೀರಭದ್ರಪ್ಪ ಆಕ್ರೋಶ ಹೊರ ಹಾಕಿದ್ದಾರೆ.