ಬಿಎಸ್‌ವೈ-ಸವದಿ ರಾಜಕೀಯ ಗಿಮಿಕ್ ಮಾಡ್ತಿದ್ದಾರೆ ಎಂದ ಮಾಜಿ ಸಚಿವ
ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರ ರಾಜಕೀಯ ಗಿಮಿಕ್| ಸಿಎಂ, ಡಿಸಿಎಂ ವಿರುದ್ಧ ಮಾಜಿ ಸಚಿವ ಎಂ.ಬಿ. ಪಾಟೀಲ ಆರೋಪ| ನೀರಾವರಿ ಯೋಜನೆ ಬಗ್ಗೆ ತಳಬುಡವಿಲ್ಲದೆ ಸಿಎಂ, ಡಿಸಿಎಂ ಮಾತನಾಡಬಾರದು| ಇದನ್ನು ಚುನಾವಣೆ ಸಂದರ್ಭದಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳಬಾರದು| ಹಾಲಿ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರಕ್ಕೆ ನೀರು ಕೊಡಲು ಸಾಧ್ಯವಿಲ್ಲ| ಮಹಾರಾಷ್ಟ್ರಕ್ಕೆ ನೀರು ಬಿಡಲು ಕೊಟ್ಟಲಗಿ ಕೆರೆಯಿಂದ ಸಾಧ್ಯ|
ವಿಜಯಪುರ(ಅ.19): ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನೀರು ಬಿಡುವ ಬಗ್ಗೆ ಹೇಳಿಕೆ ನೀಡುವ ಮೂಲಕ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನೀರಾವರಿ ಯೋಜನೆ ಬಗ್ಗೆ ತಳಬುಡವಿಲ್ಲದೆ ಸಿಎಂ, ಡಿಸಿಎಂ ಮಾತನಾಡಬಾರದು. ಇದನ್ನು ಚುನಾವಣೆ ಸಂದರ್ಭದಲ್ಲಿ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಾಲಿ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಮಹಾರಾಷ್ಟ್ರಕ್ಕೆ ನೀರು ಬಿಡಲು (ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ) ಕೊಟ್ಟಲಗಿ ಕೆರೆಯಿಂದ ಸಾಧ್ಯ. ಇದಕ್ಕೆ ಪ್ರತ್ಯೇಕ ಜಾಕ್ವೆಲ್ ನಿರ್ಮಾಣದ ಅವಶ್ಯಕತೆ ಇದೆ. ಮಹಾರಾಷ್ಟ್ರಕ್ಕೆ ಕೊಟ್ಟಲಗಿ ಕೆರೆಯಿಂದ ನೀರು ಕೊಡಲು ರೈತನೊಬ್ಬ ಅಡ್ಡಿಪಡಿಸುತ್ತಿದ್ದಾನೆ. ತಾವು ಆತನ ಮನವೊಲಿಸುತ್ತೇವೆ ಎಂದರು.
ಕೊಟ್ಟಲಗಿ ಯೋಜನೆ ಇನ್ನೂ ಮುಗಿದಿಲ್ಲ. ಆದರೂ ಸಿಎಂ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ ಮಹಾರಾಷ್ಟ್ರ ಚುನಾವಣೆ ಪ್ರಚಾರ ಭಾಷಣದಲ್ಲಿ ನೀರು ಕೊಡುವುದಾಗಿ ಹೇಳುತ್ತಿದ್ದಾರೆ. ಇದು ರಾಜಕೀಯ ಗಿಮಿಕ್ ಎಂದು ತಿಳಿಸಿದ್ದಾರೆ.
ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ 3600 ಕೋಟಿ ವೆಚ್ಚದಲ್ಲಿ ನಾನು ಮಾಡಿದ ಯೋಜನೆಯಾಗಿದೆ. ಇದನ್ನು ನಾವೇ ರೂಪಿಸಿ ಟೆಂಡರ್ ಕರೆದು ಮುಗಿಸಿದ್ದೇವೆ. ಈ ಯೋಜನೆಯಿಂದ 1.35 ಲಕ್ಷ ಎಕರೆ ನೀರಾವರಿ ಸೌಲಭ್ಯ ದೊರೆಯಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ನಿಗದಿತ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.
ಮಾನವೀಯತೆ ದೃಷ್ಟಿಯಿಂದ ಕುಡಿಯುವ ಸಲುವಾಗಿ ಕರ್ನಾಟಕಕ್ಕೆ ಮಹಾರಾಷ್ಟ್ರ ನೀರು ಕೊಡಬಹುದು. ಮಹಾರಾಷ್ಟ್ರಕ್ಕೆ ಕರ್ನಾಟಕ ನೀರು ಕೊಡಬಹುದು. ನೆರೆಹೊರೆ ರಾಜ್ಯಗಳಲ್ಲಿ ಕೊಡು- ಕೊಳ್ಳುವ ನೀತಿ ಒಳ್ಳೆಯದು ಎಂದರು.
ಈಗಾಗಲೇ ಮಹಾರಾಷ್ಟ್ರದ ತಿಕ್ಕುಂಡಿ, ಧರಿ ಬಡಚಿ, ಉಮರಾಣಿ ಕೆರೆಗಳಿಗೆ ಕುಡಿಯಲು ನಾನು ಜಲ ಸಂಪನ್ಮೂಲ ಸಚಿವನಾಗಿದ್ದಾಗ ನೀರು ಬಿಟ್ಟಿದ್ದೇನೆ. ಆದರೆ ಈಗ ತಾವೇ ನೀರು ಬಿಟ್ಟಿರುವುದಾಗಿ ಸಿಎಂ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾರಾಷ್ಟ್ರದ ಜತ್ತ ಭಾಗದಲ್ಲಿ ಕನ್ನಡ ಭಾಷಿಕರೇ ಹೆಚ್ಚಿದ್ದಾರೆ. ಆ ಜನರಿಗೆ ಕುಡಿಯಲು ನೀರು ಕೊಡುವುದರಲ್ಲಿ ತಪ್ಪಿಲ್ಲ. ಆದರೆ ಹೊಸದಾಗಿ ಯೋಜನೆ ರೂಪಿಸಿ ನೀರು ಬಿಡಲು ಕ್ರಮ ಕೈಗೊಳ್ಳಬೇಕು. ಆ ಯೋಜನೆಗೆ ತಗಲುವ ವೆಚ್ಚವನ್ನು ಮಹಾರಾಷ್ಟ್ರ ಸರ್ಕಾರ ಭರಿಸಬೇಕು ಎಂದರು.
ಸಿಎಂ ಯಡಿಯೂರಪ್ಪ ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಬೇಕು. ಮುಖ್ಯಮಂತ್ರಿಗಳು ತಮ್ಮ ಬದ್ಧತೆಯನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಬಾರದು. ಚುನಾವಣೆ ಬಳಿಕ ಸಹ ಯಡಿಯೂರಪ್ಪ ಮಹಾರಾಷ್ಟ್ರದ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಬೇಕು ಎಂದರು.
ಮಹದಾಯಿ ಬಗ್ಗೆ ಕಾಳಜಿ ಇದ್ದರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.