Asianet Suvarna News Asianet Suvarna News

ಗೋಕರ್ಣ ಬಳಿ ಮುಳುಗುತ್ತಿದ್ದ ಹಡಗು ರಕ್ಷಣೆ; 8 ವಿಜ್ಞಾನಿಗಳ ಸಹಿತ 36 ಮಂದಿ ಸೇಫ್..!

ಕಾರವಾರದ ಗೋಕರ್ಣ ಬಳಿ ಮುಳುಗಡೆ ಭೀತಿಯಲ್ಲಿ ಇದ್ದ 8 ವಿಜ್ಞಾನಿಗಳನ್ನು ಹೊಂದಿದ್ದ ಸಂಶೋಧನಾ ಹಡಗನ್ನು ಇಂಡಿಯನ್ ಕೋಸ್ಟ್ ಗಾರ್ಡ್ ರಕ್ಷಣೆ ಮಾಡಿದೆ.
 

ಗೋಕರ್ಣದಿಂದ ಸುಮಾರು 40 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಎಂಜಿನ್ ಕೆಟ್ಟು ಮುಳುಗುವ ಹಂತದಲ್ಲಿದ್ದ ಹಡಗನ್ನು ರಕ್ಷಣೆ ಮಾಡಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷಿಯಾನೋಗ್ರಾಫಿಗೆ ಸೇರಿದ ಆರ್.ವಿ.ಸಿಂಧು ಸಾಧನಾ ಎಂಬ ಸಂಶೋಧನಾ ಹಡಗು ಇದಾಗಿದ್ದು, 8 ವಿಜ್ಞಾನಿಗಳು ಹಾಗೂ‌ ಹಡಗಿನ ಸಿಬ್ಬಂದಿ ಸೇರಿ ಒಟ್ಟು 36 ಜನರು ಅದರಲ್ಲಿ ಇದ್ದರು.
ಸಂಶೋಧನಾ ಕಾರ್ಯದ ಭಾಗವಾಗಿ ಗೋವಾದಿಂದ ಕೊಚ್ಚಿಯತ್ತ ಹಡಗಿನಲ್ಲಿ ವಿಜ್ಞಾನಿಗಳು ಸಾಗುತ್ತಿದ್ರು. ಸಮುದ್ರದಲ್ಲಿ ಬೃಹತ್ ಅಲೆಗಳು ಹಾಗೂ ವಿಪರೀತ ಗಾಳಿಯಿಂದಾಗಿ ಮಂಗಳೂರು, ಕಾರವಾರ ಬಂದರಿನ ಟಗ್ ನೆರವಿಗೆ ಧಾವಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ಗೋವಾದಿಂದ ಶಿಪ್‌ನೊಂದಿಗೆ  ಇಂಡಿಯನ್ ಕೋಸ್ಟ್ ಗಾರ್ಡ್ ಕಾರ್ಯಾಚರಣೆಗೆ ಇಳಿದಿದೆ.
ಬುಧವಾರ ರಾತ್ರಿಯೇ ಹಡಗನ್ನು ರವಾನೆ ಮಾಡಿ ಸಂಶೋಧನಾ ಹಡಗನ್ನು ದುರಸ್ಥಿ ಮಾಡಲು ಪ್ರಯತ್ನಿಸಿದ್ದರು, ಹಾಗೂ ಈ ವೇಳೆ ಮತ್ತೆರಡು ಬೋಟ್‌ಗಳನ್ನು ಕೂಡಾ ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿತ್ತು. ವಿಜ್ಞಾನಿಗಳಿದ್ದ ಹಡಗಿನ ದುರಸ್ಥಿ ಸಾಧ್ಯವಾಗದ ಕಾರಣ ಗೋವಾದತ್ತ ಹಡಗನ್ನು  ಕೋಸ್ಟ್ ಗಾರ್ಡ್ ಎಳೆದೊಯ್ಯುತ್ತಿದ್ದು, ಹಡಗಿನಲ್ಲಿ ಗೋವಾದತ್ತ ವಿಜ್ಞಾನಿಗಳ ತಂಡ ಹಿಂತಿರುಗುತ್ತಿದೆ.