ಹೆಲ್ತ್ ಕೇರ್ ಎಕ್ಸಲೆನ್ಸ್ ಅವಾರ್ಡ್ 2023: ವೈದ್ಯಲೋಕದ 25 ಅನಘ್ರ್ಯ ರತ್ನಗಳಿಗೆ ನಮನ
ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 25 ಅನಘ್ರ್ಯ ವೈದ್ಯ ರತ್ನಗಳಿಗೆ ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ-2023ನ್ನು ನೀಡಿ ಸನ್ಮಾನಿಸುವ ಮೂಲಕ ಇಡೀ ವೈದ್ಯಸಮೂಹಕ್ಕೆ ಗೌರವ ಸಲ್ಲಿಸಿವೆ.
ಬೆಂಗಳೂರು (ಆ.11): ಕೋವಿಡ್‌ನಂತಹ ಮಹಾಮಾರಿಯ ಸಂದರ್ಭದಲ್ಲೂ ರೋಗಿಗಳಿಗಾಗಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಿರುವ ವೈದ್ಯರ ಸೇವೆಯನ್ನು ಗುರುತಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಇಂತಹ ಜವಾಬ್ದಾರಿಯುತ ಕಾರ್ಯವನ್ನು ನಿತ್ಯದ ತಾಜಾ ಸುದ್ದಿಯೊಂದಿಗೆ ಜನಪರ ಕಾರ್ಯದಲ್ಲೂ ಮುಂಚೂಣಿಯಲ್ಲಿರುವ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಂಸ್ಥೆ ಯಶಸ್ವಿಯಾಗಿ ಮಾಡಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ 25 ಅನಘ್ರ್ಯ ವೈದ್ಯ ರತ್ನಗಳಿಗೆ ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ-2023ನ್ನು ನೀಡಿ ಸನ್ಮಾನಿಸುವ ಮೂಲಕ ಇಡೀ ವೈದ್ಯಸಮೂಹಕ್ಕೆ ಗೌರವ ಸಲ್ಲಿಸಿವೆ.
ಹೋಟೆಲ್ ಲಲಿತ್ ಅಶೋಕದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಮಾಡಿ ಸಾವಿರಾರು ರೋಗಿಗಳಿಗೆ ಹೊಸ ಜೀವನ ಕೊಟ್ಟಂತಹ ಸಾಧಕ ವೈದ್ಯರಿಗೆ ಸ್ಮರಣಿಕೆ, ಪ್ರಶಸ್ತಿ ಫಲಕ ಮತ್ತು ಅಮೃತ್‌ನೋನಿ ಉತ್ಪನ್ನಗಳನ್ನು ಕೊಡುಗೆಯಾಗಿ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಚಲನಚಿತ್ರ ನಟಿ ಪ್ರಿಯಾಂಕಾ ಉಪೇಂದ್ರ, ಕನ್ನಡಪ್ರಭದ ಪ್ರಧಾನ ಸಂಪಾದಕ ರವಿ ಹೆಗಡೆ , ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.
ವೈದ್ಯರಿಗೆ ಅದ್ಧೂರಿ ಸ್ವಾಗತ: ಬಾಗಲಕೋಟೆ, ಹೊಸಪೇಟೆ, ವಿಜಯಪುರ, ಶಿವಮೊಗ್ಗ, ಬೆಳಗಾವಿ, ರಾಯಚೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾಧಕ ವೈದ್ಯರು ಮತ್ತು ಅವರ ಕುಟುಂಬದ ಸದಸ್ಯರನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಿಬ್ಬಂದಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಚಿಕ್ಕದಾಗಿ ಚೊಕ್ಕವಾಗಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಿಯೂ ಲೋಪವಾದಂತೆ ಪ್ರಶಸ್ತಿ ಪ್ರದಾನ ಸಮಾರಂಭವು ಸುಸೂತ್ರವಾಗಿ ನಡೆಯಿತು. ನಿರೂಪಕಿ ಪ್ರತಿಮಾ ಭಟ್ ಅತ್ಯಂತ ಸರಳವಾಗಿ ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ಗಮನ ಸೆಳೆದರು.
ಸಾಧಕರ ಕಿರುಚಿತ್ರ ಪ್ರದರ್ಶನ: ಹೆಲ್ತ್ ಕೇರ್ ಎಕ್ಸಲೆನ್ಸ್ ಅವಾರ್ಡ್ 2023ಕ್ಕೆ ಆಯ್ಕೆಯಾದ ಪ್ರತಿಯೊಬ್ಬ ಸಾಧಕ ವೈದ್ಯರದ್ದೂ ಒಂದೊಂದು ಯಶೋಗಾಥೆ. 25 ಸಾವಿರ ಹೆರಿಗೆ ಮಾಡಿಸಿದ ಬಾಗಲಕೋಟೆಯ ಜಯಶ್ರೀ ಯೆಮ್ಮಿ ಅವರು ಎಚ್‌ಐವಿಪೀಡಿತ ಗರ್ಭಿಣಿಗೆ ಚಿಕಿತ್ಸೆ ನೀಡಿ, ಮಗುವಿಗೆ ಎಚ್‌ಐವಿ ಹರಡದಂತೆ ಯಶಸ್ವಿಯಾಗಿ ಹೆರಿಗೆ ಮಾಡಿಸಿ ಸೈ ಎನ್ನಿಸಿಕೊಂಡಿದ್ದರೆ, ವಿಜಯಪುರದ ಡಾ.ಮಲ್ಲನಗೌಡ ಬಸನಗೌಡ ಬಿರಾದಾರ್ ಅವರು ಕ್ಷಯರೋಗಿಗಳ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯ. ಹೀಗೆ ಒಬ್ಬೊಬ್ಬ ವೈದ್ಯರ ಸಾಧನೆಯೂ ಸರ್ವಮನ್ನಣೆಗೆ ಪಾತ್ರವಾದುದೇ ಆಗಿದೆ. 25 ವೈದ್ಯರ ಬಾಲ್ಯ, ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದ ಸಾಧನೆಯನ್ನೊಳಗೊಂಡ ಕಿರುಚಿತ್ರವನ್ನು ಪ್ರದರ್ಶಿಸುವ ಮೂಲಕ ಅವರ ಸಾಧನೆ ಪರಿಚಯಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.