Party Rounds: ಸಿದ್ದರಾಮಯ್ಯ ಸ್ವಗ್ರಾಮದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಗಲಾಟೆ
ಸಿದ್ದರಾಮಯ್ಯ ಸ್ವಗ್ರಾಮದಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಘಟನೆಗೆ ಸಂಬಂಧಸಿದಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು (ಏ.28): ವರುಣಾ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಸಿದ್ದರಾಮನ ಹುಂಡಿ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಗಲಾಟೆಯಲ್ಲಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತ ನಾಗೇಶ್ ಅವರ ಆರೋಗ್ಯವನ್ನು ಅಭ್ಯರ್ಥಿ ವಿ.ಸೋಮಣ್ಣ ಮತ್ತು ಸಂಸದ ಪ್ರತಾಪ್ ಸಿಂಹ ವಿಚಾರಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿ. ಸೋಮಣ್ಣ ಅವರು ವರುಣಾ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರನ್ನು ಭಯಪಡಿಸುವ ಕೆಲಸ ಆಗುತ್ತಿದೆ ಎಂದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಕ್ಕೆ ಕೊಡುಗೆ ಕೊಟ್ಟಿದ್ದೇನೆ ಎಂದು ಹೇಳಿದರು.
ಬಳಿಕ ಸಂಸದ ಪ್ರತಾಪ್ ಸಿಂಹ ಮಾತನಾಡಿ ಸಿದ್ದರಾಮಯ್ಯ ಒಬ್ಬ ಜಾತಿವಾದಿ ಸಿದ್ದರಾಮಯ್ಯ ಅವರಿಗೆ ಸ್ವಜಾತಿ ಮಾತ್ರ ಮುಖ್ಯ ಅನ್ನೋದು ವರುಣಾ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಜಾತಿವಾದಿಯಾಗಿರುವುದರಿಂದ ಎಲ್ಲಾ ವರ್ಗದ ಜನ ಸೋಮಣ್ಣ ಪರವಾಗಿ ನಿಂತಿದ್ದಾರೆ. ಸೋಮಣ್ಣ ಒಂದು ಕರೆ ಕೊಟ್ಟರೆ ನಿಮಗು, ಎಲ್ಲಾ ಊರುಗಳಲ್ಲೂ ಇದೇ ಆಗಬಹುದು ಆಗ ಪರಿಸ್ಥಿತಿ ಏನಾಗುತ್ತದೆ ಊಹಿಸಿ. ಇದನ್ನು ನೀವು ಮುಂದುವರಿಸಿದರೆ ನಮಗೂ ಶಕ್ತಿ ಇದೆ. ಅದನ್ನು ನಾವು ಸಾಬೀತು ಮಾಡಬೇಕಾಗುತ್ತೆ ಆಗ ವರುಣಾ ಶಾಂತಿ ಕೆಡುತ್ತದೆ ಎಂದು ಎಚ್ಚರಿಕೆ ಕೊಟ್ಟರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.