ಸಚಿವ ಸ್ಥಾನವೇ ಪಕ್ಕಾ ಆಗಿಲ್ಲ: ಆಗಲೇ ಸರ್ಕಾರಿ ಕಾರು, ಮನೆ, ಕೊಠಡಿ ಬುಕಿಂಗ್‌ ಫುಲ್‌!

ಕೂಸು ಹುಟ್ಟೋದಕ್ಕೂ ಮುನ್ನ ಕುಲಾವಿ ಹೊಲಿಸಿದಂತೆ, ರಾಜ್ಯದ ಶಾಸಕರು ಸಚಿವರಾಗಿವುದಕ್ಕೂ ಮುನ್ನವೇ ಸರ್ಕಾರಿ ಕಾರು, ಬಂಗಲೆ ಹಾಗೂ ವಿಧಾನಸೌಧದ ಕೊಠಡಿಗಳನ್ನು ಬುಕಿಂಗ್‌ ಮಾಡುತ್ತಿದ್ದಾರೆ.

First Published May 19, 2023, 5:42 PM IST | Last Updated May 19, 2023, 5:42 PM IST

ಬೆಂಗಳೂರು (ಮೇ 19): ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಪಡೆದ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಾಗೂ ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಿ ನಾಳೆ (ಶನಿವಾರ) ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ವೇಳೆ ಸುಮಾರು 28 ಶಾಸಕರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಸಚಿವರಾಗುವ ಮುನ್ನವೇ ಬಹುತೇಕರು ಸರ್ಕಾರಿ ಕಾರು, ಮನೆ ಹಾಗೂ ವಿಧಾನಸೌಧದ ಕೊಠಡಿಗಳನ್ನು ಬುಕಿಂಗ್‌ ಮಾಡಿ ಕಾಯ್ದಿರಿಸಿಕೊಳ್ಳುತ್ತಿದ್ದಾರೆ. ಮಂತ್ರಿ ಆಗೋಕು ಮುನ್ನ ಕಾರುಗಳ ರಿಜಿಸ್ಟರ್ ಮಾಡಿಕೊಂಡ ಸಂಭಾವ್ಯ ಸಚಿವರು, ಡಿಪಿಎಆರ್ ಮೂಲಕ ಕಾರುಗಳು‌ ಹಾಗೂ ಕೊಠಡಿ ಗಳ ಬುಕ್ ಮಾಡುತ್ತಿದ್ದಾರೆ. ಜೊತೆಗೆ, ಅಧಿಕಾರಿಗಳಿಗೆ ತಮ್ಮ ಆಪ್ತರ ಮೂಲಕ ರಿಜಿಸ್ಟರ್ ಮಾಡಿಸಿರುವ ಸಚಿವ ಸ್ಥಾನದ ಆಕಾಂಕ್ಷಿಗಳು, ತಾವು ಈ ಹಿಂದೆ ಬಳಕೆ ಮಾಡಿದ್ದ ಕಾರು ಹಾಗೂ ಕೊಠಡಿ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೆಲವರು ಲಕ್ಕಿ ನಂಬರ್ ಇರುವ ಕಾರುಗಳು ಹಾಗೂ ವಿಧಾನಸೌಧದಲ್ಲಿ ಕೊಠಡಿಗಳನ್ನು ಬುಕ್ ಮಾಡುತ್ತಿದ್ದಾರೆ.