Hassan: ಮತಯಾಚನೆಗೆ ಹೋದರೆ ಹೊಡೆಯಲು ಬಂದ ಗ್ರಾಮಸ್ಥರು: ಸ್ಥಳದಿಂದ ಕಾಲ್ಕಿತ್ತು ಬಚಾವ್ ಆದ ಎನ್.ಆರ್. ಸಂತೋಷ್‌

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆಗೆ ಹೋಗಿದ್ದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್.ಆರ್.ಸಂತೋಷ್‌ ಅವರ ಮೇಲೆ ಅರಸೀಕೆರೆ ತಾಲ್ಲೂಕಿನಲ್ಲಿ, ಬೆಳಗುಂಬ ಗ್ರಾಮಸ್ಥರು ಹಲ್ಲೆ ಮಾಡಲು ಮುಂದಾಗಿದ್ದಾರೆ.

First Published Feb 25, 2023, 6:56 PM IST | Last Updated Feb 25, 2023, 6:56 PM IST

ಹಾಸನ (ಫೆ.25): ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎನ್.ಆರ್.ಸಂತೋಷ್‌ ಅವರು ಮತಯಾಚನೆಗೆ ಹೋದ ವೇಳೆ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನಲ್ಲಿ, ಬೆಳಗುಂಬ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಹಲ್ಲೆ ಮಾಡಲು ಮುಂದಾಗಿದ್ದಾರೆ. 

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಯಾಚನೆಗೆ ಆಗಮಿಸಿದ್ದ ವೇಳೆ ಸ್ಥಳೀಯ ಸಹಕಾರ ಸಂಘ (ಸೊಸೈಟಿ) ವಿಚಾರವಾಗಿ ಮಾತನ್ನು ಆರಂಭಿಸಿದ್ದಾರೆ. ಈ ವೇಳೆ ನಾನು ಹಲವು ವರ್ಷಗಳಿಂದ ಕೇಳಿದರೂ ಯಾವೊದೊಂದು ನೆರವು ನೀಡಲು ಮುಂದಾಗಲಿಲ್ಲ. ನಾವೇ ಕಷ್ಟಪಟ್ಟು ಸೊಸೈಟಿಗೆ 1 ಕೋಟಿ ರೂ.ಗಳನ್ನು ಹಾಕಿಸಿಕೊಂಡಿದ್ದೇವೆ. ಈಗ ಹಣ ಬಂದ ತಕ್ಷಣವೇ ನೀನು ಮಾತನಾಡಲು ಬಂದಿದ್ದೀಯಾ. ನಮಗೆ ಒಂದಾದರೂ ಒಳ್ಳೆಯ ಕೆಲಸವನ್ನು ಮಾಡಿಕೊಟ್ಟಿದ್ದೀಯಾ ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. 

Hassan Ticket Fight: ಹಾಸನದಿಂದ ತಾನೇ ಸ್ಪರ್ಧಿಸುವ ಸವಾಲು ಹಾಕಿದ ಎಚ್ ಡಿ ರೇವಣ್ಣ: ಮತ್ತಷ್ಟು ಕಗ್ಗಂಟಾದ ಟಿಕೆಟ್‌ ಫೈಟ್

ಸುಮ್ಮನೆ ಓಟು ಕೇಳಿಕೊಂಡು ಹೋಗು: ನಮ್ಮೂರ ಸೊಸೈಟಿ ಬಗ್ಗೆ ಮಾತನಾಡಲು ನೀನ್ಯಾರು. ನಾವೆಲ್ಲ ಕಷ್ಟಪಟ್ಟು ಸೊಸೈಟಿಗೆ ಒಂದು ಕೋಟಿ ದುಡ್ಡು ಹಾಕ್ಸಿದ್ದೀವಿ. ಈಗ ನೀನು ಸುಮ್ಮನೆ ಓಟು ಕೇಳ್ಕಂಡು ಹೋಗು. ಅದನ್ನು ಬಿಟ್ಟು ನೀನು ಬಂದು ಊರಿಗೆ ಊರನ್ನೆ ಹೊಡೆದಾಡುಸುತ್ತಿದ್ದೀಯಾ. ನೀನು ಏನು ಒಳ್ಳೆಯ ಕೆಲಸ ಮಾಡಿದ್ದೀಯಾ. ನಿನಗೆ ನಮ್ಮ ಸೊಸೈಟಿ ಬಗ್ಗೆ ಆಸಕ್ತಿ ಇದ್ದರೆ ನಿನ್ನ ಸ್ವಂತ ಜಾಗ ಕೊಡು. ನಾವ್ಯಾಕೆ ನಿನ್ನ ಜೊತೆ ಬರಬೇಕು, ನಿನ್ನಂತಹವರನ್ನು ಬಹಳ ಜನ ನೋಡಿದ್ದೀವಿ. ಎಲ್ಲಿಂದಲೂ ಬಂದು ನಮ್ಮ‌ ಮೇಲೆ‌ ದೌರ್ಜನ್ಯ ಮಾಡಲು ಬರ್ತಿಯಾ ಎಂದು ವಗ್ದಾಳಿ ನಡೆಸಿದರು.

ಗ್ರಾಮಸ್ಥರಿಂದ ಹಲ್ಲೆಗೆ ಯತ್ನ: ಇನ್ನು ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎನ್.ಆರ್.ಸಂತೋಷ್‌‌ ವಿರುದ್ದ ಗ್ರಾಮಸ್ಥರ ಆಕ್ರೋಶದ ಬೆನ್ನಲ್ಲೇ ಪರ ವಿರೋಧ ಆರಂಭವಾಗಿದೆ. ಈ ವೇಳೆ ಮತ್ತಷ್ಟು ಆಕ್ರೋಶಗೊಂಡ ಕೆಲವರು ಎನ್.ಆರ್.ಸಂತೋಷ್ ಮೇಲೆ‌ ಹಲ್ಲೆಗೆ ಮುಂದಾಗಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ಹೆದರಿ ಸ್ಥಳದಿಂದ ಎನ್.ಆರ್.ಸಂತೋಷ್ ಕಾಲ್ಕಿತ್ತಿದ್ದಾರೆ. ಮಾತಿನ ಚಕಮಕಿಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.