ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್: ಸಿ.ಟಿ.ರವಿ ಫಸ್ಟ್ ರಿಯಾಕ್ಷನ್
ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಜವಾಬ್ದಾರಿ ನೀಡಿ ಅವಕಾಶ ಮಾಡಿಕೊಟ್ಟ ಸನ್ಮಾನ್ಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾರವರಿಗೆ ಧನ್ಯವಾದಗಳು ಎಂದಿದ್ದಾರೆ.
ಬೆಂಗಳೂರು (ಜು.29): ಭಾರತೀಯ ಜನತಾ ಪಾರ್ಟಿ ತನ್ನ ಕೇಂದ್ರ ಸಂಘಟನೆಯಲ್ಲಿ ಬದಲಾವಣೆಯನ್ನು ತಂದಿದ್ದು, ರಾಷ್ಟ್ರೀಯ ಮಂಡಳಿಯನ್ನು ಪುನರ್ರಚಿಸಿ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಾಜಿ ಸಚಿವ ಸಿ.ಟಿ. ರವಿಗೆ ಕೊಕ್ ನೀಡಲಾಗಿದ್ದು, ತೆಲಂಗಾಣ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಬಂಡಿ ಸಂಜಯ್ ರೆಡ್ಡಿ ಸೇರಿದಂತೆ 8 ಮಂದಿ ಹೊಸಬರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರವಿ, ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಜವಾಬ್ದಾರಿ ನೀಡಿ ಅವಕಾಶ ಮಾಡಿಕೊಟ್ಟ ಸನ್ಮಾನ್ಯ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾರವರಿಗೆ ಧನ್ಯವಾದಗಳು ಎಂದಿದ್ದಾರೆ. ಈ ಜವಾಬ್ದಾರಿ ನನಗೆ ಬಹಳಷ್ಟು ಅನುಭವ ಮತ್ತು ಬದುಕಿಗೆ ಹೊಸ ಆಯಾಮಗಳನ್ನು ನೀಡಿದೆ. ಬೂತ್ ಮಟ್ಟದ ಕಾರ್ಯಕರ್ತನಿಂದ ಹಿಡಿದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದವರೆಗಿನ ನನ್ನ ಪಯಣದಲ್ಲಿ ನಿರಂತರವಾಗಿ ಕಾರ್ಯಕರ್ತನ ಭಾವದಲ್ಲಿ ಕೆಲಸ ಮಾಡಿದ್ದೇನೆ. ಇನ್ನು ಮುಂದೆಯೂ ಅದೇ ಭಾವದಿಂದ ಪಕ್ಷ ನೀಡಿದ ಜವಾಬ್ದಾರಿಯನ್ನು ಕಾಯಾ ವಾಚಾ ಮನಸಾ ಮಾಡುತ್ತೇನೆ ಎಂದು ಸಿ.ಟಿ. ರವಿ ಟ್ವೀಟ್ ಮಾಡಿದ್ಧಾರೆ.