Asianet Suvarna News Asianet Suvarna News

ಮಹಿಳಾ ಪೊಲೀಸರಿಂದ ರಾತ್ರಿ ಗಸ್ತು: ಕತ್ತಲಿನಲ್ಲಿಯೇ ರಸ್ತೆಗಿಳಿದ ಮಹಿಳಾ ಪೊಲೀಸ್ ಸಿಬ್ಬಂದಿ!

ಯಾವುದೇ ಕ್ಷೇತ್ರವಿರಲಿ, ಷುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಮಹಿಳೆಯರು ಹಿಂದಿನಿಂದಲೂ ಸಾಬೀತುಪಡಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿಯೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಮಹಿಳೆಯರು ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ. 

ಭಟ್ಕಳ (ಜೂ.04): ಯಾವುದೇ ಕ್ಷೇತ್ರವಿರಲಿ, ಷುರುಷರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಮಹಿಳೆಯರು ಹಿಂದಿನಿಂದಲೂ ಸಾಬೀತುಪಡಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿಯೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಮಹಿಳೆಯರು ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿಗೆ ಭಟ್ಕಳದಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರ ಗಸ್ತು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಎಸ್ಐ ಸುಮಾ ಬಿ. ನೇತೃತ್ವದಲ್ಲಿ ಕತ್ತಲಿನಲ್ಲಿಯೇ ರಸ್ತೆಗಿಳಿದ ಮಹಿಳಾ ಪೊಲೀಸ್ ಸಿಬ್ಬಂದಿ, ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿದ್ದಾರೆ. 

ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆಯನ್ನೂ ನಡೆಸಿದ್ದಾರೆ. ಯಾವುದೇ ಅಳುಕಿಲ್ಲದೇ ತಂಡ ಕಟ್ಟಿಕೊಂಡು ಭಟ್ಕಳ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಬೆಳಗ್ಗೆ 5 ಗಂಟೆಯವರೆಗೂ ನಿದ್ದೆ ಬಿಟ್ಟು ಗಸ್ತು ನಡೆಸಿ ಕತ್ತಲಲ್ಲಿ ಕಾವಲಿಗೆ ನಿಂತ ಮಹಿಳಾ ಪೊಲೀಸರು, ಈ ಕಾರ್ಯಾಚರಣೆಯ ಮೂಲಕ ಹೊಸ ಅನುಭವವನ್ನು ಪಡೆದಿದ್ದಾರೆ. ಮೊದಲ ದಿನ ಕಡಿಮೆ ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಪೊಲಿಸರನ್ನು ರಾತ್ರಿ ಗಸ್ತಿಗೆ ನಿಯೋಜಿಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. 

ಉತ್ತರಕನ್ನಡ: ಮತ್ತೆ ಶುರುವಾಗಿದೆ ಗುಡ್ಡ ಕುಸಿತದ ಆತಂಕ, ಈ ಬಾರಿ 5 ಕಡೆ ಗುಡ್ಡ ಕುಸಿತ ಪಕ್ಕಾ!

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾತ್ರಿ ವೇಳೆಯಲ್ಲಿ ಮಹಿಳಾ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದರೂ, ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನಗೊಂಡಿರಲಿಲ್ಲ. ಇದೀಗ ಭಟ್ಕಳದಲ್ಲಿ ಸಿಕ್ಕ ಯಶಸ್ಸು ಜಿಲ್ಲೆಯ ಉಳಿದ ತಾಲೂಕುಗಳಿಗೂ ವಿಸ್ತರಿಸುವ ಸಾಧ್ಯತೆ ಹೆಚ್ಚಿದೆ. ಮಹಿಳಾ ಸಬಲೀಕರಣದ ಭಾಗವಾಗಿ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಮಹಿಳಾ ಪೊಲೀಸರು ಸಂತೋಷದಿಂದಲೇ ಗಸ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Video Top Stories