Karwar: ಇಲ್ಲಿನ ದೇವಳದಲ್ಲಿ ಬೀಡಿ, ಸಿಗರೇಟು ಹಾಗೂ ಹೆಂಡವೇ ದೇವರಿಗೆ ಅರ್ಪಣೆ!

- ಹಿಂದೂಗಳು ಮಾತ್ರವಲ್ಲದೇ, ಮುಸ್ಲಿಂ, ಕ್ರಿಶ್ಚಿಯನ್ನರು ಕೂಡಾ ಭೇಟಿ

- ಕಾಳಿ ನದಿ ಸಂಗಮದಲ್ಲಿರುವ ಕಾಪ್ರಿ ದೇವರ ಜಾತ್ರಾ ಮಹೋತ್ಸವ

- ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಕಾಪ್ರಿ ದೇವರ ಜಾತ್ರೆ

- ಮದ್ಯ ನೈವೇದ್ಯ, ಸಿಗರೇಟಿನ ಆರತಿ ಮಾಡುವ ಮೂಲಕ ವಿಶಿಷ್ಟ ರೀತಿ ಪೂಜೆ
 

First Published Apr 1, 2022, 5:25 PM IST | Last Updated Apr 1, 2022, 5:25 PM IST

ಕಾರವಾರ (ಏ. 01): ದೇವಳಗಳಿಗೆ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಇಲ್ಲೊಂದು ದೇವಳದಲ್ಲಿ ಬೀಡಿ, ಸಿಗರೇಟು ಹಾಗೂ ಹೆಂಡವೇ ದೇವರಿಗೆ ಅರ್ಪಣೆ. ಹಿಂದೂಗಳು ಮಾತ್ರವಲ್ಲದೇ, ಮುಸ್ಲಿಂ, ಕ್ರಿಶ್ಚಿಯನ್ನರು ಕೂಡಾ ಈ ದೇವಳಕ್ಕೆ ಭೇಟಿ ನೀಡಿ ಬೆಲ್ಲ, ಸಕ್ಕರೆ ಹಾಗೂ ಕ್ಯಾಂಡಲ್‌ಗಳನ್ನು ಹಚ್ಚಿ ಪ್ರಾರ್ಥನೆ ಮಾಡಿ ತೆರಳುತ್ತಾರೆ. ಅಲ್ಲದೇ, ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ. 

ಕಾರವಾರ (Karwar)ನಗರದ ಕಾಳಿ ನದಿ ಸಂಗಮದಲ್ಲಿರುವ ಕಾಪ್ರಿ (Kapri) ದೇವರ ಜಾತ್ರಾ ಮಹೋತ್ಸವ ಕೊರೊನಾ (Covid 19) ಕಾಟದಿಂದ ಎರಡು ವರ್ಷಗಳ ಕಾಲ ಬಣ್ಣ ಕಳೆದುಕೊಂಡಿತ್ತು. ಈ ಬಾರಿಯಂತೂ ಎರಡು ದಿನ ಸಂಭ್ರಮದಿಂದ ಜರುಗಿದೆ. ಕಾರವಾರ ಮಾತ್ರವಲ್ಲದೇ ಹೊರರಾಜ್ಯಗಳಾದ ಮಹಾರಾಷ್ಟ್ರ,ಗೋವಾ ಜನರು ಕೂಡಾ ಈ ಆಗಮಿಸಿ ತಮ್ಮ ಹರಕೆ ತೀರಿಸಿಕೊಂಡಿದ್ದಾರೆ. ಸಾರಾಯಿ ದೇವರು ಅಂತಲೇ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಜಾತ್ರಾ ಮಹೋತ್ಸವದ ಹಿನ್ನೆಲೆ ನೂರಾರು ಭಕ್ತರು ದೇವರಿಗೆ ಮದ್ಯ ನೈವೇದ್ಯ ಮಾಡಿ ಸಿಗರೇಟಿನ ಆರತಿ ಮಾಡುವ ಮೂಲಕವೂ ವಿಶಿಷ್ಟ ರೀತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. 

ಮಕ್ಕಳಾಗದೇ ಇದ್ದ ದಂಪತಿಗಳು ಮಕ್ಕಳಾಗುವಂತೆ ಇಲ್ಲಿ ಹರಕೆ ಕಟ್ಟಿಕೊಂಡರೆ, ಇನ್ನು ಕೆಲವರು ಅನಾರೋಗ್ಯ ಸಮಸ್ಯೆ ಪರಿಹಾರಕ್ಕಾಗಿ, ಕುಟುಂಬದ ನೆಮ್ಮದಿಗಾಗಿ ಹರಕೆ ಕಟ್ಟಿಕೊಂಡು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕಳೆದುಕೊಳ್ಳುತ್ತಾರೆ‌‌. ತಮ್ಮ ಇಷ್ಟಾರ್ಥ ಪ್ರಾಪ್ತಿಯಾದ ಬಳಿಕ ಕ್ಷೇತ್ರಕ್ಕೆ ಕೋಳಿ, ಕುರಿ, ಹೆಂಡ, ಸಿಗರೇಟ್, ಬೀಡಿಗಳು ಸೇರಿದಂತೆ ಹಣ್ಣು ಕಾಯಿ ಅರ್ಪಿಸುತ್ತಾರೆ‌‌. ಅಲ್ಲದೇ, ಮಕ್ಕಳಿಗೆ ತುಲಾಭಾರ ನೆರವೇರಿಸೋದು ಕೂಡಾ ನಡೆದುಕೊಂಡು ಬಂದಿದೆ. 

 ಒಟ್ಟಿ‌ನಲ್ಲಿ‌ ಕಾರವಾರದಲ್ಲಿರುವ ಈ ವಿಶಿಷ್ಟ ದೇವಳವು ರಾಜ್ಯದಲ್ಲಿ ಮಾತ್ರವಲ್ಲದೇ, ಹೊರ ರಾಜ್ಯದಲ್ಲೂ ಭಾರೀ ಖ್ಯಾತಿ ಪಡೆದಿದೆ. ಹೆಂಡ, ಸಾರಾಯಿ, ಬೀಡಿ, ಸಿಗರೇಟನ್ನೇ ಭಕ್ತರಿಂದ ಪ್ರೀತಿಯ ರೂಪದಲ್ಲಿ ಪಡೆಯುವ ಈ ದೇವರು ಜನರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಇಷ್ಟಾರ್ಥ ನೆರವೇರಿಸುತ್ತಾನೆ. ಇದರಿಂದಲೇ ಕಾರವಾರ, ಗೋವಾ ಹಾಗೂ ಮಹಾರಾಷ್ಟ್ರದ ಜನರಿಗೆ ಖಾಪ್ರಿ ದೇವರು ಬಹಳಷ್ಟು ಪ್ರಿಯ.