Uttara Kannada: ಕೊರೋನಾ ಕಾಟದ ಬಳಿಕ ಬ್ಲಡ್ ಬ್ಯಾಂಕ್‌ನಲ್ಲೇ ಸಿಗ್ತಿಲ್ಲ ರಕ್ತ..!
* ಉತ್ತರ ಕನ್ನಡ ಜಿಲ್ಲೆಯ ಬ್ಲಡ್ ಬ್ಯಾಂಕ್‌ಗಳಲ್ಲಿ ಎದುರಾಗಿದೆ ರಕ್ತದ ಕೊರತೆ
* "O" ಪಾಸಿಟಿವ್ ಹಾಗೂ "A" ಪಾಸಿಟಿವ್ ಗ್ರೂಪ್‌ಗಳಿಗೆ ಹೆಚ್ಚಿರುವ ಬೇಡಿಕೆ
* ಬೇಡಿಕೆಯ ಅರ್ಧದಷ್ಟೂ ಪ್ರಮಾಣದ ರಕ್ತವೂ ರಕ್ತನಿಧಿಯಲ್ಲಿಲ್ಲ
ಕಾರವಾರ(ಮಾ.12): ಮಹಾಮಾರಿ ಕೊರೊನಾದಿಂದಾಗಿ ಜನರು ಎದುರಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಎಲ್ಲವನ್ನೂ ಕಳೆದುಕೊಂಡ ಜನರು ಪ್ರಸ್ತುತ ಮತ್ತೆ ತಮ್ಮ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾದರೂ ಕೊರೋನಾ ಬಗ್ಗೆ ಜನರಲ್ಲಿರುವ ಭಯ ಮಾತ್ರ ಹೋಗಿಲ್ಲ. ಇದರಿಂದಾಗಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವವರ ಸಂಖ್ಯೆ ಗಣನೀಯ ಇಳಿಯಾಗಿದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಎದುರಾಗಿದೆ.
ಹೌದು, ಬ್ಲಡ್ ಬ್ಯಾಂಕ್‌ಗಳಲ್ಲಿ ಇದೀಗ ಪಾಸಿಟಿವ್ ಹಾಗೂ ನೆಗೆಟಿವ್ ಗ್ರೂಪ್‌ಗಳ ರಕ್ತ ಸಂಗ್ರಹಣೆಗೆ ಭಾರೀ ಕೊರತೆಯುಂಟಾಗಿದ್ದು, ರೋಗಿಗಳಿಗೆ ರಕ್ತ ಪೂರೈಸಲು ಆಸ್ಪತ್ರೆಯವರು ಕಷ್ಟಪಡಬೇಕಾದ ಸ್ಥಿತಿಯುಂಟಾಗಿದೆ. ಇದಕ್ಕೆ ಪ್ರಮುಖ ಕಾರಣ ಕೊರೊನಾದಿಂದ ಗುಣಮುಖರಾದವರು ಹಾಗೂ ಇತರ ಜನಸಾಮಾನ್ಯರಿಂದ ರಕ್ತದಾನ ಮಾಡಲು ಹಿಂಜರಿಕೆ ಮತ್ತು ಎಲ್ಲೂ ರಕ್ತದಾನದ ಶಿಬಿರಗಳು ನಡೆಯದಿರುವುದು.
Upendra: ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟ ರಿಯಲ್ ಸ್ಟಾರ್ ಉಪೇಂದ್ರ
ಕೋವಿಡ್‌ನಿಂದ ಗುಣಮುಖರಾದವರು ಬಹುತೇಕ ಆಯಾಸ, ನಿಶ್ಯಕ್ತಿ, ದೇಹದ ತೂಕ ಇಳಿಕೆ ಮುಂತಾದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ರಕ್ತದಾನ ಮಾಡಿದರೆ ತಮಗೆ ತೊಂದರೆ ಎನ್ನುವ ತಪ್ಪು ಕಲ್ಪನೆಯಲ್ಲಿ ಜನರಿದ್ದಾರೆ. ಮತ್ತೊಂದೆಡೆ ಕೊರೊನಾ ಕಾರಣಕ್ಕೆ ರಕ್ತದಾನ ಶಿಬಿರ ಕೂಡಾ ನಡೆಯದೇ ಇರೋದ್ರಿಂದ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತ ಸಂಗ್ರಹಣೆ ಸಂಪೂರ್ಣ ಇಳಿಕೆಯಾಗಿದೆ. ಜಿಲ್ಲೆಯ ಬ್ಲಡ್ ಬ್ಯಾಂಕ್‌ಗಳಲ್ಲಿ “ನೋ ಸ್ಟಾಕ್’ ಅನ್ನೋ ಉತ್ತರಗಳು ಬರುತ್ತಿದ್ದು, ಪ್ಲೇಟ್‌ಲೆಟ್ ಹಾಗೂ ಪ್ಲಾಸ್ಮಾಗಳು ದೊರೆಯದೇ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ತಿಂಗಳು 1ರಿಂದ 2 ಸಾವಿರ ಯೂನಿಟ್ ರಕ್ತದ ಅವಶ್ಯಕತೆಯಿದ್ದು, ಇದೀಗ ಈ ಪ್ರಮಾಣದ ಅರ್ಧದಷ್ಟೂ ಕೂಡಾ ರಕ್ತನಿಧಯಲ್ಲಿ ಸಂಗ್ರಹವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ಹಾಗೂ ಕಾರವಾರದಲ್ಲಿ ಮಾತ್ರ ಬ್ಲಡ್ ಬ್ಯಾಂಕ್‌ಯಿದೆ. ಹೀಗಾಗಿ ಯಾವುದೇ ತಾಲೂಕಿನಲ್ಲಿ ಆಪರೇಷನ್, ಡೆಲಿವರಿ ಮುಂತಾದ ಸಮಯಗಳಲ್ಲಿ ಹೆಚ್ಚಿನ ರಕ್ತದ ಅವಶ್ಯಕತೆಯಿದ್ದಾಗ ಇಲ್ಲಿಂದಲೇ ಕೊಂಡೊಯ್ಯಲಾಗುತ್ತದೆ. ಅಲ್ಲದೇ, ತಲಸ್ಸೇಮಿಯಾ ರೋಗಿಗಳಿಗೂ ರಕ್ತದ ಸಾಕಷ್ಟು ಅವಶ್ಯಕತೆಯಿದೆ. ಜಿಲ್ಲೆಯಲ್ಲಿ ಇದೀಗ "O"ಪಾಸಿಟಿವ್ ,"A"ಪಾಸಿಟಿವ್, "O"ನೆಗೆಟಿವ್ ರಕ್ತದ ಕೊರತೆ ಹೆಚ್ಚಿದೆ. ಇನ್ನು ವರದಿ ಪ್ರಕಾರ, ರಾಜ್ಯದಲ್ಲೇ ಶೇ.70 ರಷ್ಟು ರಕ್ತ ಸಂಗ್ರಹಣೆ ಇಳಿಮುಖವಾಗಿದ್ದು, ರಕ್ತ ನಿಧಿಯಲ್ಲಿ ಕೊರತೆಯನ್ನು ನೀಗಿಸಲು ಹಳೇ ರಕ್ತದಾನಿಗಳಿಗೆ ಕರೆ ಮಾಡಿ ತೆಗೆದುಕೊಳ್ಳಲಾಗುತ್ತಿದ್ದು, ಹೊಸ ರಕ್ತದಾನಿಗಳು ಯಾರೂ ಮುಂದೆ ಬರುತ್ತಿಲ್ಲ.ಹೀಗಾಗಿ ರಕ್ತ ಸಂಗ್ರಹಣೆ ಹಾಗೂ ಪೂರೈಕೆ ದೊಡ್ಡ ಸವಾಲಾಗಿದೆ. ಇನ್ನು ಖಾಸಗಿ ಆಸ್ಪತ್ರೆಯಗಳಲ್ಲೂ ರಕ್ತ ಸಂಗ್ರಹಣೆಯ ಕೊರತೆ ಕಾಣುತ್ತಿದ್ದು, ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಜನರು ಹೆಚ್ಚಿನ ಹಣ ತೆತ್ತು ರಕ್ತ ಪಡೆಯಬೇಕಾದ ಸ್ಥಿತಿಯಿದೆ.