ಕೋಲಾರದ ಕೆರೆ ಮಣ್ಣು ಅಕ್ರಮ ಸಾಗಾಣಿಕೆ: ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ
* ಕೆರೆಯ ಮಣ್ಣು ಹೊರ ರಾಜ್ಯಗಳಿಗೆ ಅಕ್ರಮ ಸಾಗಾಣಿಕೆ
* ನೆರೆಯ ಆಂಧ್ರ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ರವಾನೆ
* ಟೈಲ್ಸ್, ಅಲಂಕಾರಿ ವಸ್ತುಗಳು, ಪಿಂಗಾಣಿಕೆ ಕೋಲಾರದ ಮಣ್ಣು ಬಳಕೆ
ಕೋಲಾರ(ಏ.19): ಪ್ರಪಂಚಕ್ಕೆ ಚಿನ್ನವನ್ನ ಕೊಟ್ಟ ಜಿಲ್ಲೆ ಕೋಲಾರ. ಚಿನ್ನದ ನಾಡು ಅಂತಾನೇ ಮತ್ತೊಂದು ಹೆಸರು ಇದೆ. ಇಲ್ಲಿಯ ಭೂ ಪ್ರದೇಶ ಚಿನ್ನ, ಹಾಲು, ರೇಷ್ಮೆ ಹಾಗೂ ತರಕಾರಿ ಎಲ್ಲವನ್ನೂ ಕೊಟ್ಟಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕೆರೆಗಳಿರೋ ಜಿಲ್ಲೆಯೂ ಕೋಲಾರ. ಇಲ್ಲಿಯ ಮಣ್ಣು ಕೂಡ ಚಿನ್ನದ ಮಣ್ಣು ಅಂತಾನೇ ಹೆಸರಾಗಿದೆ. ಇದರಿಂದಾಗಿ ಕೆರೆ ಮಣ್ಣನ್ನ ಬಿಡದ ಮಾಫಿಯಾದವ್ರು ಜಿಲ್ಲೆಯ ಕೆರೆಗಳಲ್ಲಿರುವ ಮಣ್ಣನ್ನ ಹೊರ ರಾಜ್ಯಗಳಿಗೆ ಮಾರಾಟ ಮಾಡ್ತಾ ಇದ್ದಾರೆ.
ಜಿಲ್ಲೆಯಲ್ಲಿ ಖನಿಜ ಸಂಪತ್ತು ಹೇರಳವಾಗಿದೆ. ಅದರಲ್ಲೂ ಚಿನ್ನದ ಗಣಿಗಾರಿಕೆ ನಿಂತು ದಶಕಗಳೇ ಕಳೆದಿದೆ. ಕಲ್ಲು ಗಣಿಗಾರಿಕೆ ಸದ್ಯಕ್ಕೆ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ ಮಣ್ಣನ್ನು ಬಿಡದ ಮಣ್ಣು ಮಾಫಿಯಾದವ್ರು ರಾತ್ರೋ ರಾತ್ರಿ ಮಣ್ಣನ್ನ ಹೊರ ರಾಜ್ಯಗಳಿಗೆ ಸಾಗಾಣಿಕೆ ಮಾಡ್ತಾಯಿದ್ದಾರೆ. ದಂಧೆಕೋರರಿಗೆ ಜಿಲ್ಲೆಯ ಮಾಲೂರು ಹಾಗೂ ಮುಳಬಾಗಲು ತಾಲ್ಲೂಕಿನ ಕೆರೆಗಳೇ ಟಾರ್ಗೆಟ್. ಜೆಸಿಬಿಗಳ ಮೂಲಕ ಮಣ್ಣನ್ನ ತೆಗೆದು ಟನ್‌ಗಟ್ಟಲೆ ಟಿಪ್ಪರ್ಗಳ ಮೂಲಕ ರಾತ್ರೋರಾತ್ರಿ ಹೊರ ರಾಜ್ಯಗಳಿಗೆ ಕಳುಹಿಸಿಕೊಡ್ತಾರೆ. ಕೋಲಾರದ ಮಣ್ಣಿಗೆ ಔಷಧಿಯ ಗುಣಗಳಿದ್ದು, ವಿವಿಧ ಅಲಂಕಾರಿಕ ವಸ್ತುಗಳ ತಯಾರಿಕೆಗೂ ಈ ಮಣ್ಣು ಬೇಕು.
PSI Recruitment Scam: ದಿವ್ಯಾಗೂ ಬಿಜೆಪಿಗೂ ಸಂಬಂಧವಿಲ್ಲ: ವರಸೆ ಬದಲಿಸಿದ ಕಮಲ ಪಾಳಯ
ಹೊರ ರಾಜ್ಯಗಳಲ್ಲಿ ಹೆಚ್ಚು ಬೇಡಿಕೆ ಇರೋ ಕೋಲಾರದ ಜೇಡಿ ಮಣ್ಣನ್ನ ಅಕ್ರಮವಾಗಿ ಕಳುಹಿಸಿಕೊಡಲಾಗುತ್ತಿದೆ. ನೆರೆಯ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಕೋಲಾರ ಜಿಲ್ಲೆಯ ಮಣ್ಣಿಗೆ ಬಹಳಷ್ಟು ಬೇಡಿಕೆಯಿದೆ. ದುಬಾರಿ ಬೆಲೆಯ ಟೈಲ್ಸ್, ಹೆಂಚು, ಪಿಂಗಾಣಿ ವಸ್ತುಗಳ ತಯಾರಿಕೆಗೆ ಕೆಲ ದಲ್ಲಾಳಿಗಳ ಮೂಲಕ ಜಿಲ್ಲೆಯ ಜೀವಾಳವಾಗಿರುವ ಕೆರೆ ಮಣ್ಣನ್ನ ಮಾಫಿಯಾದವ್ರು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ರೂ ಜಿಲ್ಲಾಡಳಿತ, ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡ್ತಾಯಿದ್ದಾರೆ.
ಸ್ಥಳೀಯರ ನೆರವಿನೊಂದಿಗೆ ಮಣ್ಣು ಮಾಫಿಯಾದಲ್ಲಿ ಭಾಗಿಯಾದವ್ರು ಮೊದಲಿಗೆ ಇಲಾಖೆಯಿಂದ ಅನುಮತಿ ಪಡೆಯುತ್ತಾರೆ. ಮೂರು ಅಡಿಯಷ್ಟು ಮಾತ್ರ ಕೆರೆ ಮಣ್ಣು ತೆಗೆಯಲು ಅನುಮತಿ ನೀಡಿದ್ರೆ, ಮಾಫಿಯಾದವ್ರು ಮನಸೋಯಿಚ್ಚೆ ದೊಡ್ಡ ದೊಡ್ಡ ಗುಂಡಿಗಳನ್ನ ತೆಗೆದು 10 ರಿಂದ 15 ಅಡಿಗಳಷ್ಟು ಮಣ್ಣು ತೆಗೆಯುತ್ತಾರೆ. ಇದ್ರಿಂದ ಕೆರೆಗಳ ಸೌಂದರ್ಯ ಹಾಳಾಗಿ, ನೀರು ನಿಲ್ಲಲು ಕೂಡ ಆಗದಂತೆ ಕೆರೆಗಳ ಸ್ವರೂಪವೆ ಬದಲಾಗುತ್ತಿವೆ. ಇಂತಹ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಸ್ಥಳೀಯ ಕುಂಬಾರರಿಗೆ ಹಾಗೂ ಹೆಂಚು, ಇಟ್ಟಿಗೆ ಕಾರ್ಖಾನೆಗಳಿಗೆ ಮಣ್ಣು ತೆಗೆಯಲು ಅಧಿಕಾರಿಗಳೇ ಅನುಮತಿ ನೀಡಿದ್ದಾರೆ. ಕೆರೆ ಮಣ್ಣು ತೆಗೆಯುತ್ತಿರುವ ಪರಿಣಾಮ ಸ್ಥಳೀಯ ರಸ್ತೆಗಳು ಹದೆಗೆಟ್ಟಿವೆ. ಇದೆಲ್ಲದ್ದಕ್ಕೂ ಮುಕ್ತಿ ಸಿಗಬೇಕಾದ್ರೆ ಸ್ಥಳೀಯವಾಗಿ ನಡೆಯುತ್ತಿರುವ ಮಣ್ಣು ಮಾಫಿಯಾವನ್ನ ತಡೆಯಬೇಕು ಅಂತಾರೆ ಸ್ಥಳೀಯರು.
ಒಟ್ನಲ್ಲಿ, ಚಿನ್ನದ ನಾಡಲ್ಲಿ ಮಣ್ಣಿಗೂ ಬಂಗಾರದ ಬೆಲೆ ಬಂದಿದ್ದು, ಖನಿಜ ಸಂಪತ್ತನ್ನ ರಕ್ಷಣೆ ಮಾಡಬೇಕಿದೆ. ರಾಜ್ಯದಲ್ಲೆ ಅತಿ ಹೆಚ್ಚು ಕೆರೆಗಳನ್ನ ಹೊಂದಿರುವ ಜಿಲ್ಲೆಯ ಕೆರೆಗಳನ್ನ ರಕ್ಷಣೆ ಕೂಡಾ ಮಾಡಬೇಕಿದೆ. ನೈಸರ್ಗಿಕ ಸಂಪತ್ತನ್ನ ರಕ್ಷಣೆ ಉಳಿಸಬೇಕಾಗಿರೋದು ಜಿಲ್ಲೆಯ ಜನ್ರ ಮತ್ತು ಅಧಿಕಾರಿಗಳ ಜವಾಬ್ದಾರಿ ಕೂಡ.