ನೀರಿಲ್ಲದೇ ಒಣಗುತ್ತಿವೆ ಮೆಣಸಿನಕಾಯಿ ಗಿಡಗಳು: ಟ್ಯಾಂಕರ್ ಮೂಲಕ ನೀರು ಹರಿಸಿದ ಅನ್ನದಾತರು
ರೈತರು ತುಂಗಾಭದ್ರಾ ಕಾಲುವೆಗೆ ನೀರು ಬರುತ್ತೆ ಅಂತ ನಂಬಿದ್ರು. ಎಕರೆಗೆ 30-40 ಸಾವಿರ ಖರ್ಚು ಮಾಡಿ ಮೆಣಸಿನಕಾಯಿ ಗಿಡಗಳು ಬೆಳೆಸಿದ್ರು.ಆದ್ರೆ ನೀರು ಹರಿಯದೇ ಬೆಳೆಗಳು ಬಾಡಿ ಹೋಗುತ್ತಿದೆ.ಅಷ್ಟೇ ಅಲ್ಲ ಇವನ್ನು ಉಳಿಸಿಕೊಳ್ಳಲು ಅನ್ನದಾತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ಕರುನಾಡಲ್ಲಿ ಬರದ ಛಾಯೆ ಆವರಿಸಿದೆ. ಮಳೆ ಕೈಕೊಟ್ಟಿದ್ದು ಅನ್ನದಾತರು ಕಂಗಾಲಾಗಿದ್ದಾರೆ. ರಾಯಚೂರಿನ ಮರ್ಚಟಹಾಳ್, ದಿನ್ನಿ, ಗಾರಲದಿನ್ನಿ, ಮಟಾಮಾರಿ, ನೆಲಹಾಳ ಹೀಗೆ ಹತ್ತಾರು ಗ್ರಾಮದ ರೈತರು ನೂರಾರು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಗಿಡ ಬೆಳೆಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ತುಂಗಾಭದ್ರಾ ಎಡದಂಡೆ ಕಾಲುವೆ ನೀರು ಬರುತ್ತೆ ಅಂತ ಎಕರೆಗೆ 20-25 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಮೆಣಸಿನಕಾಯಿ ಗಿಡಗಳು ಕೂಡ ರೈತರ ಪರಿಶ್ರಮಕ್ಕೆ ಹೂ ಬಿಟ್ಟಿದ್ದು ಚಿಕ್ಕ ಕಾಯಿಗಳು ಆಗುತ್ತಿವೆ. ಇನ್ನೇನು ಮೆಣಸಿನ ಕಾಯಿ ಬಿಡಬೇಕು. ಇದೇ ಹೊತ್ತಲ್ಲಿ ನೀರಿಲ್ಲ. ಮಳೆಯೂ ಇಲ್ಲ. ಇತ್ತ ತುಂಗಭದ್ರಾ ಕಾಲುವೆಯಿಂದಲೂ ನೀರು ಬಿಟ್ಟಿಲ್ಲ. ಹೀಗಾಗಿ ಬಿಸಿಲಿನ ತಾಪಕ್ಕೆ ಮೆಣಸಿನಕಾಯಿ ಗಿಡಗಳು ಒಣಗುತ್ತಿವೆ. ಕಣ್ಣೆದುರೇ ಬೆಳೆ ನಾಶವಾಗುತ್ತಿರೋದನ್ನ ಸಹಿಸಿಕೊಳ್ಳಲಾಗದ ರೈತರು ಟ್ಯಾಂಕರ್ ಮೂಲಕ ನೀರು ಸಪ್ಲೈ ಮಾಡ್ತಿದ್ದಾರೆ. ಆದ್ರೆ ಒಂದು ಟ್ಯಾಂಕರ್‌ಗೆ 500,600 ರೂಪಾಯಿ ಖರ್ಚಾಗುತ್ತಿದೆ. ಹೀಗಾಗಿ ತುಂಗಾಭದ್ರಾ ಎಡದಂಡೆ ಕಾಲುವೆ ನೀರು ಬಿಡುವಂತೆ ಮನವಿ ಮಾಡ್ತಿದ್ದಾರೆ. ಕೆಲವರು ಸ್ವಂತ ಜಮೀನಲ್ಲಿ ಬೆಳೆ ಬೆಳದರೆ. ಮತ್ತೆ ಕೆಲವರು ಜಮೀನು ಲೀಸ್‌ಗೆ ಪಡೆದು ವ್ಯವಸಾಯ ಮಾಡಿದ್ದಾರೆ. ಇವರ ಗೋಳಂತೂ ಹೇಳ ತೀರದು. ಮೆಣಸಿನಕಾಯಿ ಬೆಳೆಗೆ ಈಗಾಗಲೇ ಎಕರೆಗೆ 25-30 ಸಾವಿರ ರೂ. ಖರ್ಚು ಮಾಡಿದ್ದಾರೆ. ಇದರ ಮೇಲೆ ಟ್ಯಾಂಕರ್ ನೀರಿಗಾಗಿ ಎಕರೆಗೆ 15-16 ಸಾವಿರ ಖರ್ಚು ಬರ್ತಿದೆ. ಇಷ್ಟೆಲ್ಲ ಹಣ ಎಲ್ಲಿಂದ ತರೋದು ಎಂದು ಗೋಳಾಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಪೇಮೆಂಟ್‌ಗಾಗಿ ನಿತ್ಯ ಗುತ್ತಿಗೆದಾರರ ಅಲೆದಾಟ: ಕೆಲವೇ ಗಂಟೆಗಳಲ್ಲಿ ಸಿಕ್ತು 8 ತಿಂಗಳ ಬಾಕಿಗೆ ಪರಿಹಾರ !