ಉಡುಪಿ ಪರ್ಯಾಯೋತ್ಸವಕ್ಕೆ ಮುಸ್ಲಿಂ ಸೌಹಾರ್ದ ಸಮಿತಿಯು ಹೊರೆಕಾಣಿಕೆ ನೀಡುವುದಾಗಿ ಪ್ರಕಟಿಸಿದೆ. ಆದರೆ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಇದಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಉಡುಪಿ: ಕಳೆದ ವರ್ಷದಂತೆ ಈ ಬಾರಿಯೂ ಉಡುಪಿ ಪರ್ಯಾಯೋತ್ಸವ ಸಂದರ್ಭ ಜಿಲ್ಲೆಯ ಮುಸ್ಲಿಮರು ಹೊರೆಕಾಣಿಕೆ ನೀಡಲಿದ್ದಾರೆ ಮತ್ತು ಪರ್ಯಾಯೋತ್ಸವ ಮೆರ‍ವಣಿಗೆ ಸಂದರ್ಭ ಸಾರ್ವಜನಿಕರಿಗೆ ತಂಪು ಪಾನೀಯಗಳನ್ನು ವಿತರಿಸುತ್ತಾರೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಅಧ್ಯಕ್ಷ ಕೆ. ಅಬೂಬಕ್ಕರ್ ಪರ್ಕಳ ತಿಳಿಸಿದ್ದಾರೆ. ಆದರೆ ಹೊರೆ ಕಾಣಿಕೆಗೆ ಸಮಿತಿ ಅನುಮತಿ ನೀಡಿಲ್ಲ ಎಂದು ಸಮಿತಿ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಸ್ಪಷ್ಟಪಡಿಸಿದ್ದಾರೆ. ಈ ವಿಚಾರ ಈಗ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ. ಅಬೂಬಕ್ಕರ್‌ ಪರ್ಕಳ, ಪುರಾತನ ಕಾಲದಿಂದಲೂ ಶ್ರೀ ಕೃಷ್ಣ ಮಠ ಮತ್ತು ಮುಸ್ಲಿಮ್ ಸಮಿದಾಯದ ಮಧ್ಯೆ ಇದ್ದ ಸೌಹಾರ್ದತೆಯನ್ನು ಮುಂದುವರಿಸುವುದಕ್ಕಾಗಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಹಲವಾರು ವರ್ಷಗಳಿಂದ ಉಡುಪಿ ಪರ್ಯಾಯೋತ್ಸವಕ್ಕೆ ಹೊರೆಕಾಣಿಕೆ ಸಮರ್ಪಿಸುತ್ತಿದೆ ಎಂದರು

ಜ. 9ರಂದು ನಡೆಯುವ ಭಾವಿ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಡುಪಿ ಪುರಪ್ರವೇಶ ಮೆರವಣಿಗೆ ಸಂದರ್ಭ ಪಾಲ್ಗೊಳ್ಳುವ ಸಾವಿರಾರು ಭಕ್ತರಿಗೆ ಸೌಹಾರ್ದ ಸಮಿತಿ ವತಿಯಿಂದ ತಂಪು ಪಾನೀಯ ವಿತರಿಸಲಾಗುತ್ತದೆ. ಜ. 13ರಂದು ಜೋಡುಕಟ್ಟೆಯಿಂದ ಭವ್ಯ ಮೆರವಣಿಗೆ ಮೂಲಕ ಶಿರೂರು ಮಠಕ್ಕೆ ಹಸಿರು ಹೊರೆಕಾಣಿಕೆ ನೀಡಲಾಗುತ್ತದೆ. ಜ.18ರಂದು ನಡೆಯುವ ಪರ್ಯಾಯೋತ್ಸವ ಮೆರವಣಿಗೆಯಲ್ಲೂ 10 ಸಾವಿರ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಗುತ್ತದೆ ಎಂದರು.

ದಫ್ ವಾದನ ಕಾರ್ಯಕ್ರಮ

ಹೊರೆಕಾಣಿಕೆ ಮೆರವಣಿಗೆಯಲ್ಲಿ ಮುಸ್ಲಿಮರ ಸಾಂಸ್ಕೃತಿಕ ಕಲೆಗಳಲ್ಲಿ ಒಂದಾದ ದಫ್ ವಾದನ ಕಾರ್ಯಕ್ರಮ ನಡೆಯಲಿದೆ. ಈ ಮೂರೂ ಕಾರ್ಯಕ್ರಮಗಳಿಗೂ ಮುಸ್ಲಿಂ ಬಾಂಧವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ವಿನಂತಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಸ್ಲಿಂ ಸೌಹಾರ್ದ ಪರ್ಯಾಯ ಸಮಿತಿ ಪ್ರಮುಖರಾದ ಹಂಝತ್, ರಫೀಕ್ ದೊಡ್ಡಣಗುಡ್ಡೆ, ಪೀರು ಸಾಹೇಬ್, ರಿಯಾಝ್ ಪಳ್ಳಿ, ಚಾರ್ಲ್ಸ್ ಆಂಬ್ಲರ್, ಆರಿಫ್, ಅನ್ಸಾರ್ ಅಹಮದ್, ಇಕ್ಬಾಲ್ ಮಯ್ಯದಿ ಅತ್ರಾಡಿ ಮತ್ತು ಪ್ರಚಾರ ಸಮಿತಿಯ ರಹೀಂ ಉಜಿರೆ ಉಪಸ್ಥಿತರಿದ್ದರು.

ಅನುಮತಿ ನೀಡಿಲ್ಲ: ಯಶ್‌ಪಾಲ್

ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುವುದಕ್ಕೆ ಪರ್ಯಾಯ ಸ್ವಾಗತ ಸಮಿತಿ ಯಾವುದೇ ಅನುಮತಿ ನೀಡಿಲ್ಲ ಎಂದು ಸಮಿತಿ ಅಧ್ಯಕ್ಷರಾಗಿರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದ್ದಾರೆ. ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆ ನೀಡುವ ಬಗ್ಗೆ ಮುಸ್ಲಿಂ ಸೌಹಾರ್ದ ಸಮಿತಿಯವರು ಈವರೆಗೂ ಸ್ವಾಗತ ಸಮಿತಿಗೆ ಯಾವುದೇ ಮಾಹಿತಿ ನೀಡಿಲ್ಲ, ಮಠದ ವತಿಯಿಂದಲೂ ಮುಸ್ಲಿಂ ಸೌಹಾರ್ದ ಸಮಿತಿಗೆ ಹೊರೆಕಾಣಿಕೆ ನೀಡುವಂತೆ ಮನವಿಯನ್ನೂ ಮಾಡಿರುವುದಿಲ್ಲ.

ಸ್ವಾಗತ ಸಮಿತಿಯ ಹೊರೆಕಾಣಿಕೆ ಸಮಿತಿಗೆ ಈ ಬಗ್ಗೆ ಮಾಹಿತಿ ಇಲ್ಲದೆ ಮುಸ್ಲಿಂ ಸೌಹಾರ್ದ ಸಮಿತಿ ಗೊಂದಲ ಸೃಷ್ಟಿಸಲು ಮುಂದಾಗಿದ್ದು, ಅತ್ಯಂತ ಧಾರ್ಮಿಕ ಶ್ರದ್ಧಾ ಭಕ್ತಿಯ ಮೂಲಕ ಶ್ರೀ ಕೃಷ್ಣ ದೇವರಿಗೆ ಸಮರ್ಪಿಸುವ ಹೊರೆಕಾಣಿಕೆ ವಿಚಾರದಲ್ಲಿ ಸಮಿತಿಯ ನಿರ್ಧಾರವೇ ಅಂತಿಮವಾಗಿದ್ದು, ಮುಸ್ಲಿಂ ಸೌಹಾರ್ದ ಸಮಿತಿ ನೀಡಿರುವ ಹೊರೆಕಾಣಿಕೆ ಸಮರ್ಪಣೆಯ ಪತ್ರಿಕಾಗೋಷ್ಠಿಗೂ ಪರ್ಯಾಯ ಸ್ವಾಗತ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಹಿಂದೂಗಳ ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನ

ಮುಸ್ಲಿಂ ಸೌಹಾರ್ದ ಸಮಿತಿ ಮೂಲಕ ಪರ್ಯಾಯ ಹೊರೆಕಾಣಿಕೆ ಸಮರ್ಪಣೆ, ನೀರಿನ ಬಾಟಲ್ ವಿತರಣೆ ಬಗ್ಗೆ ಏಕಾಏಕಿಯಾಗಿ ಪತ್ರಿಕಾಗೋಷ್ಟಿ ನಡೆಸಿ, ಹೊರೆಕಾಣಿಕೆ ಮೆರವಣಿಗೆಯಲ್ಲಿ ದಫ್ ನಡೆಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಪರ್ಯಾಯ ಸ್ವಾಗತ ಸಮಿತಿಯ ಅನುಮತಿ ಪಡೆಯದೆ ಮುಸ್ಲಿಂ ಸೌಹಾರ್ದ ಸಮಿತಿ ಏಕಪಕ್ಷೀಯವಾಗಿ ಇಂತಹ ಸೂಕ್ಷ್ಮ ವಿಚಾರಗಳ ಮೂಲಕ ಪರ್ಯಾಯೋತ್ಸವ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಬಾರದು ಎಂದು ಯಶ್ ಪಾಲ್ ಸುವರ್ಣ ಹೇಳಿದ್ದಾರೆ.