ಉಡುಪಿ(ಅ.17):  ಇಲ್ಲಿನ ಭೈರಂಪಳ್ಳಿಯ ಧೂಪದಕಟ್ಟೆ ಎಂಬಲ್ಲಿ ರಸ್ತೆಯಲ್ಲಿ ಮೋರಿ ಕುಸಿದು, ಪೆರ್ಡೂರು-ಹರಿಖಂಡಿಗೆ ನಡುವೆ ಸಂಪರ್ಕ ಕಡಿದು, ಸುಮಾರು 10 ಲಕ್ಷ ರು.ಗೂ ಅಧಿಕ ನಷ್ಟ ಸಂಭವಿಸಿದೆ.

ಮಂಗಳವಾರ ಸಂಜೆ ಹಠಾತ್ತನೆ ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ ಧೂಪದಕಟ್ಟೆ ಎಂಬಲ್ಲಿ ರಸ್ತೆಗೆ ಅಡ್ಡಲಾಗಿದ್ದ ತೋಡಿಗೆ ಮೇಲಿನ ರಸ್ತೆ ಸಂಪೂರ್ಣ ಕುಸಿದಿದೆ. ಈ ಹಿಂದೆ ಈ ತೋಡಿಗೆ ಸಣ್ಣ ಸೇತುವೆಯಿತ್ತು. ಕಳೆದ ವರ್ಷ ಲೋಕೋಪಯೋಗಿ ಇಲಾಖೆಯವರು ಈ ರಸ್ತೆಗೆ ಡಾಂಬರು ಮಾಡುವಾಗ ಹಳೆಯ ಕಾಲ ಈ ಸೇತುವೆ ದುರಸ್ತಿಗೊಳಿಸದೆ, ಅದರ ಮೇಲೆಯೇ ಡಾಂಬರು ಹಾಕಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಳೆಗೆ ಭಾರಿ ಪ್ರಮಾಣದಲ್ಲಿ ನೀರು ಈ ತೋಡಿನಲ್ಲಿ ಹರಿದಾಗ ಸುಮಾರು 40 ವರ್ಷಗಳಷ್ಟು ಹಳೆಯ ಸೇತುವೆಯ ಅಕ್ಕಪಕ್ಕದ ಕಲ್ಲುಗಳು ಕುಸಿದು, ಡಾಂಬರು ಸಹಿತ ಸೇತುವೆ ತೋಡಿನೊಳಗೆ ಕುಸಿದು ಬಿದ್ದಿದೆ.
ಇದರಿಂದ ಭಾರಿ ನೀರು, ಕಲ್ಲು ಮಣ್ಣು ಅಕ್ಕಪಕ್ಕದ ಗದ್ದೆಗಳಿಗೆ ನುಗ್ಗಿದೆ. ಇದರಿಂದ ಸುಮಾರು 20 ಎಕ್ರೆ ಪ್ರದೇಶಗ ಬತ್ತದ ಬೆಳೆಗೆ ಹಾನಿಯಾಗಿದೆ.

ಈ ಸಂದರ್ಭದಲ್ಲಿ ಈ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ಆದರೆ ಒಂದು ಬದಿಯಲ್ಲಿ ಮೋರಿ ಕುಸಿಯುತ್ತಿರುವುದನ್ನು ಕಂಡ ಜನರು ವಾಹನಗಳನ್ನು ನಿಲ್ಲಿಸಿದ್ದಾರೆ, ಜನರು ನೋಡುನೋಡುತ್ತಿದ್ದಂತೆ ಕೇವಲ 2 ನಿಮಿಷಗಳಲ್ಲಿ 30 ಅಡಿಗೂ ಅಗಲ, 15 ಅಡಿ ಆಳದ ಕಂದಕ ರಸ್ತೆ ಮಧ್ಯೆ ನಿರ್ಮಾಣವಾಗಿದೆ. ಈ ದೃಶ್ಯಗಳು ಜನರ ಮೊಬೈಲುಗಳಲ್ಲಿ ಸೇರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಈ ರಸ್ತೆ ಸಂಪರ್ಕಿಸುವ ಪೆರ್ಡೂರು, ಹರಿಖಂಡಿಗೆ, ಅಜೆಕಾರು, ದೊಂಡರಂಗಡಿ ಭಾಗದ ಜನರ ಸಂಚಾರಕ್ಕೆ ತೊಂದರೆಯಾಗಿದ್ದು, ಅವರು ಸುಮಾರು 5 ಕಿ.ಮೀ.ಗಳಷ್ಟು ಸುತ್ತು ಬಳಸಿ ಬೇರೆ ರಸ್ತೆಯಲ್ಲಿ ಸಂಚರಿಸುವಂತಾಗಿದೆ.
ಹಳೆಯ ಸೇತುವೆಯನ್ನು ದುರಸ್ತಿಗೊಳಿಸಿ ಅದರ ಮೇಲೆ ಡಾಂಬರು ಹಾಕದ ಲೋಕೋಪಯೋಗಿ ಇಲಾಖೆಯ ಬೇಜವಾಬ್ದಾರಿ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾತ್ಕಾಲಿಕ ವ್ಯವಸ್ಥೆಯ ಭರವಸೆ:

ಸದ್ಯಕ್ಕೆ ಭಾರಿ ಗಾತ್ರದ ಪೈಪುಗಳನ್ನು ಅಳವಡಿಸಿ, ಅದರ ಮೇಲೆ ರಸ್ತೆಯನ್ನು ಮರು ನಿರ್ಮಾಣ ಮಾಡಿ ಓಡಾಡಕ್ಕೆ ಅನುಕೂಡ ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸಂಜೆಯೇ ತಹಸೀಲ್ದಾರ್‌ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಮುಂದೆ ಹೋಗದಂತೆ ಬ್ಯಾರಿಕೇಡ್‌ ಹಾಕಿದ್ದಾರೆ.

ಶಾಶ್ವತ ಸೇತುವೆ ನಿರ್ಮಿಸಿ:

ಉಡುಪಿ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈಗ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸದೆ ಶಾಶ್ವತ ಸೇತುವೆಯನ್ನು ನಿರ್ಮಿಸಬೇಕು ಎಂದವರು ಒತ್ತಾಯಿಸಿದ್ದಾರೆ.
ಸೇತುವೆ ಮತ್ತು ರಸ್ತೆ ಮರು ನಿರ್ಮಾಣ ಮತ್ತು ರೈತರು ಕಳೆದುಕೊಂಡ ಬೆಳೆ, ಗದ್ದೆಗಳನ್ನು ಪುನಃ ಸಜ್ಜುಗೊಳಿಸುವ ವೆಚ್ಚವೆಲ್ಲಾ ಸೇರಿ ಸುಮಾರು ಕೋಟಿ ರು.ಗೂ ಅಧಿಕ ನಷ್ಟ ಸಂಭವಿಸಿದ ಎಂದು ತಿಳಿಸಿದ್ದಾರೆ.