ಟೋಕಿಯೋ ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್‌ಗೆ ಚಿನ್ನ, ಮನೋಜ್‌ಗೆ ಕಂಚು
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಪ್ರಮೋದ್ ಭಗತ್
* ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದ ಪ್ರಮೋದ್
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 16ಕ್ಕೆ ಏರಿಕೆ
ಟೋಕಿಯೋ(ಸೆ.04): ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಟೂರ್ನಿಯನ್ನು ಸೇರ್ಪಡೆಗೊಳಿಸಲಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಚಿನ್ನ ಗೆದ್ದುಕೊಡುವಲ್ಲಿ ಪ್ರಮೋದ್ ಭಗತ್ ಯಶಸ್ವಿಯಾಗಿದ್ದಾರೆ. ಇನ್ನು ಮನೋಜ್ ಸರ್ಕಾರ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮೋದ್ ಭಗತ್ ಹಾಗೂ ಮನೋಜ್ ಸರ್ಕಾರ ತಲಾ 2-0 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಇದರೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ
ಪ್ರಮೋದ್ ಭಗತ್ 21-14, 21-17 ಅಂಕಗಳಿಂದ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥನಿಲ್ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ಭಾರತಕ್ಕೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 4ನೇ ಚಿನ್ನದ ಪದಕ ಲಭಿಸಿದಂತಾಗಿದೆ.
ಲಂಡನ್ ಒಲಿಂಪಿಕ್ಸ್ ಟೀವಿಯಲ್ಲಿ ನೋಡಿ ಆರ್ಚರ್ ಆದ ಹರ್ವಿಂದರ್ ಸಿಂಗ್!
ಮೊದಲ ಗೇಮ್‌ನ ಆರಂಭದಲ್ಲೇ ಪ್ರಮೋದ್ ಭಗತ್ ಹಾಗೂ ಡೇನಿಯಲ್ ಬೆಥನಿಲ್ ನಡುವೆ 6-6 ಅಂಕಗಳ ಸಮಬಲದ ಹೋರಾಟ ಕಂಡು ಬಂದಿತು. ಆ ಬಳಿಕ ಪ್ರಮೋದ್ ಕೊಂಚ ಆಕ್ರಮಣಕಾರಿ ಆಟ ಮೈಗೂಡಿಸಿಕೊಂಡು, ನಿರಂತರವಾಗಿ ಅಂಕಗಳನ್ನು ಗಳಿಸುತ್ತಲೇ ಮುನ್ನಡೆದರು. ಪರಿಣಾಮ 21-14 ಅಂಕಗಳಿಂದ ಭಗತ್ ಮೊದಲ ಗೇಮ್ ತಮ್ಮದಾಗಿಸಿಕೊಂಡರು.
ಇನ್ನು ಎರಡನೇ ಗೇಮ್ಸ್‌ನಲ್ಲಿ ಗ್ರೇಟ್ ಬ್ರಿಟನ್‌ನ ಬೆಥನಿಲ್ 5-1ರ ಮುನ್ನಡೆ ಕಾಯ್ದುಕೊಂಡು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಇದೇ ಮುನ್ನಡೆಯನ್ನು ಬೆಥನಿಲ್ 12-4ಕ್ಕೆ ಹೆಚ್ಚಿಸಿಕೊಂಡರು. ಆದರೆ ಇದಾದ ಬಳಿಕ ಗ್ರೇಟ್ ಕಮ್‌ಬ್ಯಾಕ್ ಮಾಡಿದ ಭಗತ್ ಅಂತರವನ್ನು 10-12ಕ್ಕೆ ತಗ್ಗಿಸಿದರು. ಬಳಿಕ ಕಮ್‌ಬ್ಯಾಕ್ ಮಾಡಿದ ಭಗತ್ 17-15 ಅಂಕಗಳಿಂದ ಮುನ್ನೆಡೆ ಸಾಧಿಸಿದರು. ಅಂತಿಮವಾಗಿ ಮಿಂಚಿನ ಆಟ ಪ್ರದರ್ಶಿಸಿದ ಒಡಿಶಾ ಮೂಲದ ಭಗತ್ 21-17 ಅಂಕಗಳಿಂದ ಎರಡನೇ ಗೇಮ್ ಜಯಿಸಿ ಚಿನ್ನದ ಪದಕ ಗೆದ್ದು ಬೀಗಿದರು.
ಇನ್ನು ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಮನೋಜ್ ಸರ್ಕಾರ್ ಜಪಾನಿನ ಡೈಸುಕಿ ಫ್ಯುಸಿಹರ ಎದುರು 22-20, 21-13 ಅಂಕಗಳಿಂದ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.