ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ವರ್ಣರಂಜಿತ ಚಾಲನೆ
* ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ
* ಜಪಾನ್ ದೊರೆ ನುರಿಹಿಟೊ ಕ್ರೀಡಾಕೂಟಕ್ಕೆ ಚಾಲನೆ
* ಸಿಡಿ ಮದ್ದುಗಳನ್ನು ಸಿಡಿಸುವ ಮೂಲಕ ಆರಂಭಗೊಂಡ ಉದ್ಘಾಟನಾ ಸಮಾರಂಭ
ಟೋಕಿಯೋ(ಆ.25): ಕೊರೋನ ಸೋಂಕಿನ ಆತಂಕದ ನಡುವೆಯೇ ಟೋಕಿಯೋದಲ್ಲಿ 2020 ಪ್ಯಾರಾಲಿಂಪಿಕ್ಸ್‌ಗೆ ವರ್ಣರಂಜಿತ ಚಾಲನೆ ನೀಡಲಾಯಿತು. ಜಪಾನ್‌ನ ಕಲಾವೈಭವ, ಸಂಸ್ಕೃತಿಯನ್ನು ಉದ್ಘಾಟನಾ ಸಮಾರಂಭದಲ್ಲಿ ಮತ್ತೊಮ್ಮೆ ಅನಾವರಣಗೊಳಿಸಲಾಯಿತು. ಜಪಾನ್ ದೊರೆ ನುರಿಹಿಟೊ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಳೆದ ತಿಂಗಳಷ್ಟೇ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ವೇಳೆ ಅದ್ಧೂರಿ ಕಾರ್ಯಕ್ರಮಗಳು ನಡೆದಿದ್ದವು.
ಸಿಡಿ ಮದ್ದುಗಳನ್ನು ಸಿಡಿಸುವ ಮೂಲಕ ಆರಂಭಗೊಂಡ ಉದ್ಘಾಟನಾ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು. ವಿಕಲಾಂಗ ಚೇತನರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷವಾಗಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸುವ ರಾಷ್ಟ್ರಗಳ ಪಥಸಂಚಲನದಲ್ಲಿ ನ್ಯೂಜಿಲೆಂಡ್ ಕೋವಿಡ್ ಕಾರಣದಿಂದ ಗೈರಾಗಿತ್ತು. ಅಫ್ಘಾನಿಸ್ತಾನದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದಿದ್ದರೂ ದೇಶದ ಬಾವುಟವನ್ನು ಪ್ರದರ್ಶಿಸಲಾಯಿತು.
ಟೋಕಿಯೋ ಪ್ಯಾರಾಲಿಂಪಿಕ್ಸ್: ಭಾರತ ತಂಡಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ
ತಂಗವೇಲು ಸೇರಿ ನಾಲ್ವರು ಗೈರು: ಭಾರತದ ಧ್ವಜಧಾರಿ ಆಯ್ಕೆಯಾಗಿದ್ದ 2016ರ ರಿಯೋ ಪ್ಯಾರಾಲಿಂಪಿಕ್ಸ್ ಚಿನ್ನ ವಿಜೇತ ಮರಿಯಪ್ಪನ್ ತಂಗವೇಲು ಕೋವಿಡ್ ಸೋಂಕಿತನ ಜೊತೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಿಂದ ಹಿಂದೆ ಸರಿದಿದ್ದರು. ಇವರ ಬದಲಿಗೆ ಶಾಟ್ ಪುಟ್ ಪಟು ತೆಕ್ ಚಾಂದ್ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಮುನ್ನಡೆದರು. ಭಾರತದ ಪರ ಒಬ್ಬ ಅಥ್ಲೀಟ್, 8 ಅಧಿಕಾರಿಗಳು ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಕ್ರೀಡಾಪಟುಗಳು 9 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.