* ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪಾಲಾದ ಮತ್ತೆರಡು ಪದಕಗಳು* ಹೈಜಂಪ್‌ನಲ್ಲಿ ಪದಕ ಗೆದ್ದ ಮರಿಯಪ್ಪನ್ ತಂಗವೇಲು, ಶರದ್ ಕುಮಾರ್* ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್‌ಗೆ ಈ ಬಾರಿ ರಜತ ಪದಕ

ಟೋಕಿಯೋ(ಆ.31): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಪ್ಯಾರಾಥ್ಲೀಟ್‌ಗಳ ಪದಕ ಬೇಟೆ ಭರ್ಜರಿಯಾಗಿಯೇ ಮುಂದುವರೆದಿದ್ದು, T42 ಹೈ ಜಂಪ್ ಸ್ಪರ್ಧೆಯಲ್ಲಿ ಮರಿಯಪ್ಪನ್‌ ತಂಗವೇಲು ಬೆಳ್ಳಿ ಪದಕ ಜಯಿಸಿದ್ದರೆ, ಇದೇ ವಿಭಾಗದಲ್ಲಿ ಶರದ್ ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಎರಡಂಕಿ ಮೊತ್ತ(10) ತಲುಪಿದೆ.

ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಮರಿಯಪ್ಪನ್‌ ತಂಗವೇಲು ಇದೀಗ ಸತತ ಎರಡನೇ ಬಾರಿಗೆ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಧ್ವಜಧಾರಿಯಾಗಬೇಕಿದ್ದ ಮರಿಯಪ್ಪನ್‌ ತಂಗವೇಲು, ಕೋವಿಡ್‌ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಐಸೋಲೇಷನ್‌ಗೆ ಒಳಗಾಗಿದ್ದರು. ಹೀಗಾಗಿ ಟೋಕಿಯೋದಲ್ಲಿ ಸರಿಯಾದ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಿದ್ದೂ, 26 ವರ್ಷದ ಮರಿಯಪ್ಪನ್‌ 1.86 ಮೀಟರ್ ಎತ್ತರ ಜಿಗಿತ ಪೂರೈಸುವ ಮೂಲಕ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 

Scroll to load tweet…
Scroll to load tweet…
Scroll to load tweet…

ಇನ್ನು ಶರದ್‌ ಕುಮಾರ್ 1.83 ಮೀಟರ್ ಎತ್ತರ ಜಿಗಿಯುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ವಿಫಲವಾಗಿದ್ದ ಶರದ್ ಕುಮಾರ್ ಎರಡನೇ ಪ್ರಯತ್ನದಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ಪ್ಯಾರಾಲಿಂಪಿಕ್ಸ್‌; ಭಾರತಕ್ಕೆ ಒಲಿದ 8ನೇ ಪದಕ ಸಿಂಗ್‌ರಾಜ್‌ಗೆ ಕಂಚಿನ ಮಿಂಚು..!

ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾದ ಭಾನುವಾರ (ಆ.29) ಭಾರತ ಎರಡು ಪದಕಗಳನ್ನು ಜಯಿಸಿತ್ತು. ಇನ್ನು ಸೋಮವಾರ(ಆ.30) ಎರಡು ಚಿನ್ನ ಸಹಿತ ಒಟ್ಟು 5 ಪದಕಗಳನ್ನು ಜಯಿಸಿತ್ತು. ಇಂದು ಶೂಟಿಂಗ್‌ನಲ್ಲಿ ಸಿಂಗ್‌ರಾಜ್‌, ಹೈಜಂಪ್‌ನಲ್ಲಿ ತಂಗವೇಲು ಹಾಗೂ ಶರದ್‌ ಕುಮಾರ್ ಪದಕ ಗೆಲ್ಲುವ ಮೂಲಕ ದೇಶಕ್ಕೆ 10ನೇ ಪ್ಯಾರಾಲಿಂಪಿಕ್ಸ್‌ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲೇ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೂ ಮುನ್ನ ಭಾರತ 11 ಪದಕಗಳನ್ನು ಜಯಿಸಿತ್ತು. ಆದರೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 10 ಪದಕ ಗೆಲ್ಲುವುದರ ಮೂಲಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದ್ದು, ಮತ್ತಷ್ಟು ಪದಕ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ