ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್: ಪ್ಯಾರಾಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ IAS ಅಧಿಕಾರಿ!
* ಎಸ್‌ಎಲ್4 ವಿಭಾಗದಲ್ಲಿ ಬೆಳ್ಳಿ ಗೆದ್ದ ಕರ್ನಾಟಕ ಮೂಲದ ಸುಹಾಸ್
* ಟೋಕಿಯೋ ಪ್ಯಾರಾಒಲಿಂಪಿಕ್ಸ್ ಕೂಟದಲ್ಲಿ ಭಾರತದ ಮಿಂಚಿನ ಪ್ರದರ್ಶನ
* ಪ್ಯಾರಾಒಲಿಂಪಿಕ್ಸ್‌ನಲ್ಲಿ ಪದಕ ಮೊದಲ IAS ಅಧಿಕಾರಿ
ಟೋಕಿಯೋ(ಸೆ.05): ಎಸ್‌ಎಲ್4 ವಿಭಾಗದಲ್ಲಿ ಕರ್ನಾಟಕ ಮೂಲದ, ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಫೈನಲ್ ಪ್ರವೇಶಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಪ್ಯಾರಾ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಸೆಟಿಯವಾನ್ ಫ್ರೆಡಿ ವಿರುದ್ಧ ಸುಲಭ ಗೆಲುವು ಸಾಧಿಸಿದ್ದ ಸುಹಾಸ್, ಭಾನುವಾರ ಫೈನಲ್‌ನಲ್ಲಿ ಫ್ರಾನ್ಸ್‌ನ ಲುಕಾಸ್ ಮಜುರ್ ವಿರುದ್ಧ ಸೆಣಸಾಡಿದ್ದರು.
"
ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್‌ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿಗೆ ಕೊರಳೊಡ್ಡಿದ್ದಾರೆ. ಭಾರೀ ರೋಚಕವಾಗಿದ್ದ ಈ ಪಂದ್ಯದ ಮೊದಲ ಸೆಟ್‌ನಲ್ಲಿ ಸುಹಾಸ್ 21-15ರೆ ಮುನ್ನಡೆ ಪಡೆದುಕೊಂಡು, ಮೊದಲ ಅಂಕ ಗಳಿಸಿದ್ದರು. ಆದರೆ ಎರಡನೇ ರೌಂಡ್‌ನಲ್ಲಿ ಎದುರಾಳಿ ಆಟಗಾರ 17-21 ಮುನ್ನಡೆ ಪಡೆದುಕೊಂಡಿದ್ದರಿಂದ 1-1 ಮೂಲಕ ಸಮಬಲವಾಯಿತು. ಇನ್ನು ಮೂರನೇ ಸೆಟ್ನಲ್ಲಿಯೂ ಸುಹಾಸ್ 15-21 ಅಂಕಗಳ ಹಿನ್ನಡೆ ಸಾಧಿಸಿ 1-2 ಸೆಟ್ಗಳ ಅಂತರದಿಂದ ಸೋತ ಪರಿಣಾಮ ಬೆಳ್ಳಿ ಪದಕ ತಮ್ಮದಾಗಿಸಿದರು.
ಈ ಪಂದ್ಯಕ್ಕೂ ಮುನ್ನ ಶನಿವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಸುಹಾಸ್, ಇಂಡೋನೇಷ್ಯಾದ ಸೆಟಿಯವಾನ್ ಫ್ರೆಡಿ ವಿರುದ್ಧ 21-9, 21-15ರ ಸುಲಭ ಗೆಲುವು ಸಾಧಿಸಿದ್ದರು.
ಕರ್ನಾಟಕ ಮೂಲದ ಸುಹಾಸ್
ಎಲ್.ವೈ.ಸುಹಾಸ್ ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು. ಹಾಸನದಲ್ಲಿ ಬಾಲ್ಯ ಹಾಗೂ ಶಿಕ್ಷಣ ಪೂರೈಸಿದ ಸುಹಾಸ್ ಯತಿರಾಜ್ ತಂದೆ ಸರ್ಕಾರಿ ಉದ್ಯೋಗಿಯಾದ ಕಾರಣ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜನೀಯರಿಂಗ್ ಪದವಿ ಪಡೆದ ಸುಹಾಸ್ ಇದೀಗ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.