ಟೋಕಿಯೋ 2020: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಪೈಲ್ವಾನ್ ರವಿಕುಮಾರ್ ದಹಿಯಾ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ರವಿಕುಮಾರ್ ದಹಿಯಾ
* 57 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಪೈಲ್ವಾನ್ ರವಿಕುಮಾರ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಿದು ದಕ್ಕಿದ 2ನೇ ಬೆಳ್ಳಿ ಪದಕ
ಟೋಕಿಯೋ(ಆ.05): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ತಾರಾ ಕುಸ್ತಿಪಟು ರವಿಕುಮಾರ್ ದಹಿಯಾ 57 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಫೈನಲ್‌ನಲ್ಲಿ ರಷ್ಯಾ ಒಲಿಂಪಿಕ್ಸ್ ಕಮಿಟಿಯ ಝವೂರ್ ಉಗೆವ್ ಎದುರು ರೋಚಕ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಆರಂಭದ 30 ಸೆಕೆಂಡ್‌ಗಳಲ್ಲಿ ಉಭಯ ಕುಸ್ತಿಪಟುಗಳು ಅಂಕಗಳ ಖಾತೆ ತೆರೆಯಲಿಲ್ಲ. ಬಳಿಕ ರಷ್ಯಾದ ಕುಸ್ತಿಪಟು 1 ಅಂಕ ಗಳಿಸಿದರು. ಬಳಿಕ ಕಮ್‌ಬ್ಯಾಕ್ ಮಾಡಿದ ರವಿಕುಮಾರ್ 2-2 ಅಂಕಗಳ ಸಮಬಲ ಸಾಧಿಸುವಂತೆ ಮಾಡಿದರು. ಬಳಿಕ ಝವೂರ್ ಉಗೆವ್ ಮತ್ತೆರಡು ಅಂಕಗಳನ್ನು ಸಂಪಾದಿಸುವ ಮೂಲಕ 4-2ರ ಮುನ್ನಡೆ ಪಡೆದುಕೊಂಡರು. ಮೊದಲ ಸುತ್ತಿನ ಅಂತ್ಯಕ್ಕೆ ರಷ್ಯಾ ಪೈಲ್ವಾನ್ 4-2ರ ಮುನ್ನಡೆ ಕಾಯ್ದುಕೊಂಡಿದ್ದರು.
ಇನ್ನು ಎರಡನೇ ಸುತ್ತಿನಲ್ಲೂ ಬಿಗಿಪಟ್ಟು ಹಾಕುವ ಮೂಲಕ ಝವೂರ್ ಉಗೆವ್ ಮತ್ತೊಂದು ಅಂಕ ಸಂಪಾದಿಸಿದರು. ಕೊನೆಯ ಎರಡು ನಿಮಿಷಗಳಿದ್ದಾಗ ಝವೂರ್ ಉಗೆವ್ 7-2ರ ಮುನ್ನಡೆ ಸಾಧಿಸಿದರು. ಕೊನೆಯಲ್ಲಿ ರವಿಕುಮಾರ್ ಮತ್ತೆರಡು ಅಂಕ ಸಂಪಾದಿಸಿದರಾದರೂ, ಚಿನ್ನದ ನಗೆ ಬೀರಲು ಸಾಧ್ಯವಾಗಲಿಲ್ಲ.
ಈ ಗೆಲುವಿನೊಂದಿಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ 2 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 5 ಪದಕ ಜಯಿಸಿದಂತಾಗಿದೆ. ಫೈನಲ್‌ನಲ್ಲಿ ಸೋಲಿನ ಬಳಿಕ ಪ್ರತಿಕ್ರಿಯಿಸಿದ ರವಿಕುಮಾರ್ ದಹಿಯಾ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಪದಕದ ಬೇಟೆಯಾಡಿದ ರವಿಕುಮಾರ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ
ದೀಪಿಕ್ ಪೂನಿಯಾಗೆ ರೋಚಕ ಸೋಲು:
ಇನ್ನು 86 ಕೆ.ಜಿ ಫ್ರೀ ಸ್ಟ್ರೈಲ್ ಕುಸ್ತಿ ವಿಭಾಗದಲ್ಲಿ ರಿಪಿಶಾಜ್ ವಿಭಾಗದಲ್ಲಿ ದೀಪಕ್ ಪೂನಿಯಾ 4-2 ಅಂತರದಲ್ಲಿ ರೋಚಕ ಸೋಲು ಕಾಣುವ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು. ಸ್ಯಾನ್ ಮರಿನೋದ ಮೈಲೆಸ್ ಅಮಿನೆ ರೋಚಕ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ಗೆದ್ದು ಬೀಗಿದರು.