ಟೋಕಿಯೋ 2020: ಕಂಚು ಗೆದ್ದು, ಭಾರತೀಯರ ಹೃದಯ ಗೆದ್ದ ಹಾಕಿ ಇಂಡಿಯಾ
* ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಹಾಕಿ ಇಂಡಿಯಾ
* ಜರ್ಮನಿ ಎದುರು 5-4 ಗೋಲುಗಳ ಅಂತರದ ರೋಚಕ ಜಯ
* 41 ವರ್ಷಗಳ ಬಳಿಕ ಒಲಿಂಪಿಕ್ಸ್ ಪದಕ ಗೆದ್ದ ಭಾರತ
ಟೋಕಿಯೋ(ಆ.05): ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಹಾಕಿಯಲ್ಲಿ ಬರೋಬ್ಬರಿ 41 ವರ್ಷಗಳ ಪದಕದ ಬರವನ್ನು ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡ ನೀಗಿಸಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ ಕಂಚಿನ ಪದಕಕ್ಕಾಗಿನ ಕಾದಾಟದಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಮಣಿಸುವ ಮೂಲಕ ಭಾರತ ಹಾಕಿ ತಂಡ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ.
ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಟೈಮೂರ್ ಗೋಲು ಬಾರಿಸುವ ಮೂಲಕ ಜರ್ಮನಿಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಇದರೊಂದಿಗೆ ಮೊದಲ ಕ್ವಾರ್ಟರ್‌ನಲ್ಲಿ ಜರ್ಮನಿ 1-0 ಮುನ್ನಡೆ ಕಾಯ್ದುಕೊಂಡಿತು. ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಕಮ್‌ಬ್ಯಾಕ್ ಮಾಡುವಲ್ಲಿ ಭಾರತ ಯಶಸ್ವಿಯಾಯಿತು. ಎರಡನೇ ಕ್ವಾರ್ಟರ್‌ನಲ್ಲಿ ಭಾರತ ಮೂರು ಗೋಲು ಬಾರಿಸಿದರೆ, ಜರ್ಮನಿ ಎರಡು ಗೋಲು ಬಾರಿಸಿತು. ಇದರೊಂದಿಗೆ ಮೊದಲಾರ್ಧ ಮುಕ್ತಾಯದ ವೇಳೆಗೆ 3-3ರ ಸಮಬಲ ಸಾಧಿಸಿತು.
ಇನ್ನು ಮೂರನೇ ಕ್ವಾರ್ಟರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನ ತೋರಿದ ಮನ್‌ಪ್ರೀತ್ ಪಡೆ ಮತ್ತೆರಡು ಗೋಲು ಬಾರಿಸುವ ಮೂಲಕ ಭಾರತಕ್ಕೆ 5-3ರ ಮುನ್ನಡೆ ಒದಗಿಸಿಕೊಟ್ಟಿತು. ಇನ್ನು ಕೊನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಕೇವಲ ಒಂದು ಗೋಲು ಗಳಿಸಲಷ್ಟೇ ಶಕ್ತವಾಯಿತು.
ಭಾರತ ಹಾಕಿ ತಂಡವು 1980ರ ಬಳಿಕ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಯಿತು. ಜರ್ಮನಿಗೆ ಬರೋಬ್ಬರಿ 13 ಪೆನಾಲ್ಟಿ ಕಾರ್ನರ್ ಗಳಿಸುವ ಅವಕಾಶವಿದ್ದರೂ ಕೇವಲ ಒಂದು ಗೋಲು ಗಳಿಸಲಷ್ಟೇ ಜರ್ಮನಿ ಶಕ್ತವಾಯಿತು.