ಟೋಕಿಯೋ ಒಲಿಂಪಿಕ್ಸ್: ಕಂಚಿನ ಪದಕ ಗೆದ್ದು ಬೀಗಿದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಲೊವ್ಲಿನಾ ಬೊರ್ಗೊಹೈನ್
* ವಿಶ್ವ ಚಾಂಪಿಯನ್ ಟರ್ಕಿಯ ಬುಸಾನೆಜ್ ಸುರ್ಮೆನೆಲಿ ಎದುರು 5-0 ಅಂತರದಲ್ಲಿ ಸೋಲು
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಲಿದ ಮೂರನೇ ಪದಕ
ಟೋಕಿಯೋ(ಆ.04): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ 69 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಯುವ ಮಹಿಳಾ ಲೊವ್ಲಿನಾ ಬೊರ್ಗೊಹೈನ್ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸಾನೆಜ್ ಸುರ್ಮೆನೆಲಿ ಎದುರು 5-0 ಅಂಕಗಳ ಅಂತರದಲ್ಲಿ ಮುಗ್ಗರಿಸಿದ್ದಾರೆ. ಇದೀಗ ಅಸ್ಸಾಂನ ಲೊವ್ಲಿನಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
ಇದರೊಂದಿಗೆ ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಗೆದ್ದ ಭಾರತದ ಮೂರನೇ ಬಾಕ್ಸರ್ ಎನ್ನುವ ಕೀರ್ತಿಗೆ ಲೊವ್ಲಿನಾ ಬೊರ್ಗೊಹೈನ್ ಭಾಜನರಾಗಿದ್ದಾರೆ. ಈ ಮೊದಲು ವಿಜೇಂದರ್ ಸಿಂಗ್ (2008) ಹಾಗೂ ಮೇರಿ ಕೋಮ್ (2012) ಕಂಚಿನ ಪದಕವನ್ನು ಜಯಿಸಿದ್ದರು.
ಟೋಕಿಯೋ 2020: ಫೈನಲ್‌ಗೇರುವ ತವಕದಲ್ಲಿ ಬಾಕ್ಸಿಂಗ್ ತಾರೆ ಲೊವ್ಲಿನಾ ಬೊರ್ಗೊಹೈನ್
ಮೊದಲ ಸುತ್ತಿನಲ್ಲೇ ಹಾಲಿ ವಿಶ್ವ ಚಾಂಪಿಯನ್ ಟರ್ಕಿಯ ಬುಸಾನೆಜ್ ಸುರ್ಮೆನೆಲಿ ಘಾತಕ ಪಂಚ್‌ಗಳ ಮೂಲಕ ಭಾರತದ ಬಾಕ್ಸರ್ ಮೇಲೆ ಪ್ರಾಬಲ್ಯ ಮೆರೆದರು. ಮೊದಲ ಸುತ್ತಿನಲ್ಲಿ ಎಲ್ಲಾ 5 ಜಡ್ಜ್‌ಗಳು ಟರ್ಕಿ ಬಾಕ್ಸರ್‌ಗೆ ತಲಾ 10 ಅಂಕ ನೀಡಿದರೆ, ಲೊವ್ಲಿನಾಗೆ 9 ಅಂಕ ನೀಡಿದರು. ಇನ್ನು ಎರಡನೇ ಸುತ್ತಿನ ಆರಂಭದಲ್ಲೇ ಲೊವ್ಲಿನಾ ಉತ್ತಮ ಪಂಚ್‌ಗಳ ಮೂಲಕ ಗಮನ ಸೆಳೆದರು. ಆದರೆ ಕೊನೆಯ 30 ಸೆಕೆಂಡ್‌ಗಳಲ್ಲಿ ಟರ್ಕಿ ಬಾಕ್ಸರ್ ಲೊವ್ಲಿನಾಗೆ ತಿರುಗೇಟು ನೀಡುವ ಮೂಲಕ ಮತ್ತೊಮ್ಮೆ ಪ್ರಾಬಲ್ಯ ಮೆರೆದರು. ಇನ್ನು ಮೂರನೇ ಸೆಟ್‌ನಲ್ಲಿಯೂ ವಿಶ್ವ ಚಾಂಪಿಯನ್ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ತೋರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಇನ್ನು ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ದಿಟ್ಟ ಪ್ರದರ್ಶನ ತೋರುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 23 ವರ್ಷದ ಬಾಕ್ಸರ್ ಲೊವ್ಲಿನಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಈಗಾಗಲೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಹಾಗೂ ಪಿ.ವಿ. ಸಿಂಧು ಕಂಚಿನ ಪದಕ ಜಯಿಸಿದ್ದರು. ಇದೀಗ ಲೊವ್ಲಿನಾ ಪದಕ ಗೆಲ್ಲುವುದರೊಂದಿಗೆ ಭಾರತದ ಖಾತೆಗೆ ಮೂರು ಪದಕಗಳು ಸೇರ್ಪಡೆಯಾದಂತೆ ಆಗಿದೆ.