ಅದ್ಭುತ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ಹರ್ಯಾಣ ಸರ್ಕಾರದಿಂದ ಭರ್ಜರಿ ಗಿಫ್ಟ್!
* ಭಾರತ ಮಹಿಳಾ ಹಾಕಿ ತಂಡದ ಅದ್ಭುತ ಪ್ರದರ್ಶನ
* ಹರ್ಯಾಣ ಸರ್ಕಾರದಿಂದ ಆಟಗಾರ್ತಿಯರಿಗೆ ಕೊಡುಗೆ
* 50 ಲಕ್ಷ ನಗದು ಬಹುಮಾನ ನೀಡಿ ಗೌರವ
* ಮಹಿಳಾ ಹಾಕಿ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ
ಚಂಡೀಘಡ(ಆ. 06) ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಮಹಿಳಾ ಹಾಕಿ ತಂಡಕ್ಕೆ ಹರ್ಯಾಣ ಸರ್ಕಾರ ಭರ್ಜರಿ ಉಡುಗೊರೆ ಘೋಷಣೆ ನೀಡಿದೆ.
ಹರ್ಯಾಣ ಸರ್ಕಾರವು ರಾಜ್ಯದ ಒಂಬತ್ತು ಮಹಿಳಾ ಹಾಕಿ ಆಟಗಾರರಿಗೆ ತಲಾ 50 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.
ಟೋಕಿಯೊದಲ್ಲಿ ಶುಕ್ರವಾರ ನಡೆದ ಕಂಚಿನ ಪದಕದ ಪ್ಲೇ-ಆಫ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-4 ಅಂತರದಲ್ಲಿ ಸೋತ ನಂತರ ಭಾರತ ಮಹಿಳಾ ಹಾಕಿತಂಡ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಪದಕ ಗೆಲ್ಲಲಾಗಿಲ್ಲ ಆದರೆ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಭಾರತತದ ಹಾಕಿ ತಂಡದಲ್ಲಿ ಹರ್ಯಾಣ ಮೂಲದ 8 ಆಟಗಾರ್ತಿಯರಿದ್ದಾರೆ.
ಮಹಿಳಾ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನ
ಪಂದ್ಯದ ಅರ್ಧಕ್ಕೆ ಭಾರತೀಯ ಆಟಗಾರ್ತಿಯರು ಮುಂದೆ ಇದ್ದರು. ಆದರೆ ಸೆಕೆಂಡ್ ಹಾಫ್ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಎದುರಾಳಿ ಪಡೆ ಗೆಲವನ್ನು ತನ್ನ ಕಡೆಗೆ ಒಲಿಸಿಕೊಂಡಿತು.
ಪಂದ್ಯ ಮುಗಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕಿ ರಾಣಿ ಅವರ ತಂದೆ ರಾಂಪಾಲ್ , ನಮಗೆ ಪದಕ ಬಂದಿಲ್ಲದೆ ಇರಬಹುದು ಆದರೆ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿತು ಎಂದು ಕೊಂಡಾಡಿದ್ದಾರೆ.
ಹಾಕಿ ತಂಡಲ್ಲಿದ್ದ ನೇಹಾ ಗೋಯಲ್ ಅವರ ತಾಯಿ ಸಾವಿತ್ರಿ ಇಡೀ ಪಂದ್ಯವನ್ನು ಭಾವನಾತ್ಮಕವಾಗಿಯೇ ವೀಕ್ಷಣೆ ಮಾಡಿದರು. ಅತ್ಯಂತ ಕಠಿಣ ಪರಿಶ್ರಮದಿಂದ ಮೇಲೆ ಬಂದಿರುವ ಭಾರತದ ಮಹಿಳಾ ಹಾಕಿ ತಂಡಕ್ಕೆ ಎಲ್ಲ ಕಡೆಯಿಂದಲೂ ಮೆಚ್ಚುಗೆಗಳ ಮಹಾಪೂರ ಹರಿದು ಬಂದಿದೆ.