ಟೋಕಿಯೋ ಒಲಿಂಪಿಕ್ಸ್: ಪದಕ ಗೆಲ್ಲುವ ಮನುಭಾಕರ್-ಸೌರಭ್ ಚೌಧರಿ ಕನಸು ಭಗ್ನ..!
* 10 ಮೀಟರ್ ಮಿಶ್ರ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತಕ್ಕೆ ನಿರಾಸೆ
* ಮೊದಲ ಸುತ್ತಿನಲ್ಲೇ ಮನು ಭಾಕರ್-ಸೌರಭ್ ಜೋಡಿಗೆ ನಿರಾಸೆ
* ಅರ್ಹತಾ ಸುತ್ತಿನಲ್ಲೇ ಹೊರಬಿದ್ದ ಭಾರತದ ಮತ್ತೊಂದು ಜೋಡಿ
ಟೋಕಿಯೋ(ಜು.27): ಒಲಿಂಪಿಕ್ಸ್‌ನಲ್ಲಿ 10 ಮೀಟರ್ ಮಿಶ್ರ ಏರ್ ಪಿಸ್ತೂಲ್ ವಿಭಾಗದಲ್ಲಿ ಪದಕ ಗೆಲ್ಲಬಲ್ಲ ನೆಚ್ಚಿನ ಶೂಟರ್‌ಗಳೆನಿಸಿಕೊಂಡಿದ್ದ ಸೌರಭ್ ಚೌಧರಿ-ಮನು ಭಾಕರ್ ಹೋರಾಟ ಮೊದಲ ಸುತ್ತಿನಲ್ಲೇ ಅಂತ್ಯವಾಗಿದೆ.
10 ಮೀಟರ್ ಮಿಶ್ರ ಏರ್ ಪಿಸ್ತೂಲ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಮನು ಭಾಕರ್ ಹಾಗೂ ಸೌರಭ್ ಚೌಧರಿ ಜೋಡಿ ಮೊದಲ ಸ್ಥಾನ ಪಡೆಯುವ ಮೂಲಕ ಮೊದಲನೇ ಸುತ್ತಿಗೆ ಲಗ್ಗೆಯಿಟ್ಟಿತು. ಅರ್ಹತಾ ಸುತ್ತಿನಲ್ಲಿ ಸೌರಭ್ ಚೌಧರಿ ಕ್ರಮವಾಗಿ 98, 100 ಹಾಗೂ 98 ಅಂಕಗಳನ್ನು ಗಳಿಸಿದರೆ, ಮನು ಭಾಕರ್ 97, 94 ಹಾಗೂ 95 ಅಂಕಗಳಿಸಿದರು. ಇನ್ನು ಅರ್ಹತಾ ಸುತ್ತಿನಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೊಂದು ಜೋಡಿಯಾದ ಅಭಿಷೇಕ್ ವರ್ಮಾ ಹಾಗೂ ಯಶಸ್ವಿನಿ ಸಿಂಗ್ ದೇಶ್ವಾಲ್ 17ನೇ ಸ್ಥಾನ ಪಡೆಯುವ ಮೂಲಕ ಮೊದಲ ಸುತ್ತಿಗೇರುವ ಮೊದಲೇ ತಮ್ಮ ಅಭಿಯಾನ ಅಂತ್ಯಗೊಳಿಸಿತು.
ಟೋಕಿಯೋ 2020: ಮೀರಾಬಾಯಿ ಚಾನು ಗೆದ್ದ ಬೆಳ್ಳಿ ಪದಕ ಬಂಗಾರವಾಗುತ್ತಾ..?
ಇನ್ನು ಮೊದಲ ಸುತ್ತಿನಲ್ಲಿ ಅಗ್ರ 4 ಸ್ಥಾನ ಪಡೆದ ತಂಡವು ಪ್ರಶಸ್ತಿ ಸುತ್ತಿಗೇರುತ್ತಿದ್ದವು. ಈ ಪೈಕಿ ಮೊದಲೆರಡು ತಂಡಗಳು ಪ್ರಶಸ್ತಿ ಖಚಿತ ಪಡಿಸಿಕೊಂಡರೆ, ಮೂರು ಹಾಗೂ ನಾಲ್ಕನೇ ತಂಡವು ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸುತ್ತವೆ. ಸೌರಭ್ ಚೌಧರಿ ಅಮೋಘ ಪ್ರದರ್ಶನ ತೋರಿದರಾದರೂ, ಮನು ಭಾಕರ್ ಅವರಿಂದ ಉತ್ತಮ ಸಾಥ್ ಸಿಗಲಿಲ್ಲ. ಸೌರಭ್ 96 ಹಾಗೂ 98 ಅಂಕಗಳನ್ನು ಗಳಿಸಿದರೆ, ಮನು ಭಾಜರ್ 92 ಹಾಗೂ 94 ಅಂಕಗಳನ್ನು ಗಳಿಸುವ ಮೂಲಕ 7ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
10 ಮೀಟರ್ ಮಿಶ್ರ ಏರ್ ಪಿಸ್ತೂಲ್ ವಿಭಾಗದಲ್ಲಿ ಚೀನಾ ಹಾಗೂ ರಷ್ಯಾ ತಂಡಗಳು ಮೊದಲೆರಡು ಸ್ಥಾನ ಪಡೆಯುವ ಮೂಲಕ ಪದಕ ಖಚಿತಪಡಿಸಿಕೊಂಡರೆ, ಉಕ್ರೇನ್ ಹಾಗೂ ಸರ್ಬಿಯಾ ತಂಡಗಳು ಕಂಚಿನ ಪದಕಕ್ಕಾಗಿ ಸೆಣಸಾಟ ನಡೆಸಲಿವೆ.