ಟೋಕಿಯೋ 2020: ಸೆಮೀಸ್ನಲ್ಲಿ ಮುಗ್ಗರಿಸಿದ ಪಿ.ವಿ. ಸಿಂಧು..!
* ಟೋಕಿಯೋ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲೇ ಮುಗ್ಗರಿಸಿದ ಪಿ.ವಿ. ಸಿಂಧು
* ವಿಶ್ವ ನಂ.1 ಆಟಗಾರ್ತಿ ಎದುರು ನೇರ ಗೇಮ್‌ಗಳಲ್ಲಿ ಮುಗ್ಗರಿಸಿದ ಹೈದರಾಬಾದ್ ಆಟಗಾರ್ತಿ
* ಭಾನುವಾರ ಚೀನಾ ಆಟಗಾರ್ತಿ ಎದುರು ಸಿಂಧು ಕಂಚಿನ ಪದಕಕ್ಕಾಗಿ ಸ್ಪರ್ಧೆ
ಟೋಕಿಯೋ(ಜು.30): ಭಾರತದ ತಾರಾ ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಎದುರು 21-18, 21-12 ನೇರ ಗೇಮ್‌ಗಳಲ್ಲಿ ಸೋಲು ಕಾಣುವ ಮೂಲಕ ಸತತ ಎರಡನೇ ಬಾರಿಗೆ ಫೈನಲ್‌ಗೇರುವ ಅವಕಾಶದಿಂದ ವಂಚಿತರಾಗಿದ್ದಾರೆ. ಇದೀಗ ಸಿಂಧು ಭಾನುವಾರ ನಡೆಯಲಿರುವ ಕಂಚಿನ ಪದಕಕ್ಕಾಗಿನ ಕಾದಾಟದಲ್ಲಿ ಚೀನಾದ ಹಿಂಗ್ ಜೋ ಅವರನ್ನು ಎದುರಿಸಲಿದ್ದಾರೆ.
ಮೊದಲ ಗೇಮ್‌ನಲ್ಲೇ ವಿಶ್ವದ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ತ್ಸು ಯಿಂಗ್ ಹಾಗೂ ಪಿ.ವಿ. ಸಿಂಧು ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಪರಿಣಾಮ 11-11, 14-14, 18-18 ಸಮಬಲದ ಹೋರಾಟ ಕಂಡು ಬಂದಿತು. ಆ ಬಳಿಕ ನಿರಂತರ ಮೂರು ಅಂಕಗಳನ್ನು ಸಂಪಾದಿಸುವ ತೈ ತ್ಸು ಯಿಂಗ್ 21-18 ಅಂಕಗಳ ಅಂತರದಲ್ಲಿ ಮೊದಲ ಗೇಮ್ ತಮ್ಮದಾಗಿಸಿಕೊಂಡರು.
ಇನ್ನು ಎರಡನೇ ಗೇಮ್‌ನ ಆರಂಭದಿಂದಲೇ ಮತ್ತೊಮ್ಮೆ ಸಮಬಲದ ಹೋರಾಟ ಮೂಡಿಬಂತು. ಆರಂಭದಲ್ಲೇ ಸಿಂಧು ಹಾಗೂ ತೈ ತ್ಸು ಯಿಂಗ್ 4-4 ಅಂಕಗಳ ಸಮಬಲ ಸಾಧಿಸಿದರು. ಆ ನಂತರ ತೈ ತ್ಸು ಯಿಂಗ್ 10-6 ಅಂಕಗಳ ಮುನ್ನಡೆ ಗಳಿಸಿದರು. ಆ ಬಳಿಕ ತೈ ತ್ಸು ಯಿಂಗ್, ರಿಯೋ ಒಲಿಂಪಿಕ್ ಪದಕ ವಿಜೇತೆ ಮೇಲೆ ಪ್ರಾಬಲ್ಯ ಮೆರೆಯುವತ್ತ ದಿಟ್ಟ ಹೆಜ್ಜೆಯಿಟ್ಟರು. ಅಂತಿಮವಾಗಿ ತೈ ತ್ಸು ಯಿಂಗ್ 21-12 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾದರು.