ಟೋಕಿಯೋ 2020: ಫೈನಲ್‌ಗೆ ಲಗ್ಗೆಯಿಟ್ಟ ಪೈಲ್ವಾನ್ ರವಿ ಕುಮಾರ್ ದಹಿಯಾ, ದೇಶಕ್ಕೆ ಮತ್ತೊಂದು ಪದಕ ಫಿಕ್ಸ್..!
* ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ 4ನೇ ಪದಕ ಖಚಿತಪಡಿಸಿದ ರವಿಕುಮಾರ್ ದಹಿಯಾ
* 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತದ ಪೈಲ್ವಾನ್
* ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ಕುಸ್ತಿಪಟುವನ್ನು ಸೋಲಿಸಿದ ರವಿ ಕುಮಾರ್
ಟೋಕಿಯೋ(ಆ.04): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬುಧವಾರ ಭಾರತದ ಪಾಲಿಗೆ ಅದೃಷ್ಟ ಖುಲಾಯಿಸುವಂತೆ ಮಾಡಿದ್ದು, 57 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ರವಿ ಕುಮಾರ್ ದಹಿಯಾ ಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ 4ನೇ ಒಲಿಂಪಿಕ್ಸ್ ಪದಕವನ್ನು ಖಚಿತಪಡಿಸಿದ್ದಾರೆ. ರವಿ ಕುಮಾರ್ ಫೈನಲ್ ಪ್ರವೇಶಿಸುವುದರೊಂದಿಗೆ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ.
57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ರವಿ ಕುಮಾರ್ ದಹಿಯಾ ಕಜಕಿಸ್ತಾನದ ಸನವ್ಯಾವ್ ಎದುರು ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಹೋರಾಟ ನಡೆಸುವ ಮೂಲಕ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ. ಆರಂಭದಿಂದಲೇ ಕಜಕಿಸ್ತಾನದ ಕುಸ್ತಿಪಟು 9-2 ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಪೈಪೋಟಿ ನೀಡುವ ಮೂಲಕ ಫಲಿತಾಂಶ ತನ್ನತ್ತ ವಾಲುವಂತೆ ಮಾಡಿಕೊಳ್ಳುವಲ್ಲಿ ದಹಿಯಾ ಯಶಸ್ವಿಯಾಗಿದ್ದಾರೆ.
57 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ರವಿ ಕುಮಾರ್ ದಹಿಯಾ ರಷ್ಯಾ ಒಲಿಂಪಿಕ್ಸ್ ಕಮಿಟಿಯ ಜೌವೋರ್ ಉಗುವ್ ಅವರನ್ನು ಎದುರಿಸಲಿದ್ದಾರೆ. ಈ ಫೈನ್ಲ್ ಪಂದ್ಯವು ಆಗಸ್ಟ್ 05ರ ಸಂಜೆ 4.10ಕ್ಕೆ ಆರಂಭವಾಗಲಿದೆ.