ಟೋಕಿಯೋ 2020: ಕಂಚಿನ ಪದಕ ಗೆದ್ದ ಬೀಗಿದ ಭಜರಂಗ್ ಪೂನಿಯಾ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ ಪೈಲ್ವಾನ್ ಭಜರಂಗ್ ಪೂನಿಯಾ
* 65 ಕೆ.ಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಭಜರಂಗ್‌ಗೆ ಗೆಲುವು
* ಕಜಕಿಸ್ತಾನದ ದೌಲೆತ್ ನಿಯಾಜ್‌ಬೆಕೌ ಎದುರು 8-0 ಅಂಕಗಳ ಗೆಲುವು
ಟೋಕಿಯೋ(ಆ.07): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ 65 ಕೆ.ಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿ ಪಂದ್ಯದ ಕಂಚಿನ ಪದಕದ ಕಾದಾಟದಲ್ಲಿ ಭಾರತದ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ ಕಜಕಿಸ್ತಾನದ ದೌಲೆತ್ ನಿಯಾಜ್‌ಬೆಕೌ ಎದುರು 8-0 ಅಂಕಗಳ ಗೆಲುವು ದಾಖಲಿಸುವ ಮೂಲಕ ಕಂಚಿನ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆರನೇ ಪದಕ ಜಯಿಸಿದ ಸಾಧನೆ ಮಾಡಿದೆ
ಭಾರತದ ಭಜರಂಗ್ ಪೂನಿಯಾ ಹಾಗೂ ಕಜಕಿಸ್ತಾನದ ದೌಲೆತ್ ನಿಯಾಜ್‌ಬೆಕೌ ಮೊದಲ ಎರಡು ನಿಮಿಷದಲ್ಲಿ ಯಾವುದೇ ಅಂಕಗಳಿಸಲಿಲ್ಲ. ಇಬ್ಬರು ಕುಸ್ತಿಪಟುಗಳು ಸಾಕಷ್ಟು ಪೈಪೋಟಿ ನಡೆಸಿದರು. ಮೊದಲ ಸುತ್ತಿನ ಕೊನೆಯ ನಿಮಿಷದಲ್ಲಿ ಎರಡು ಅಂಕಗಳನ್ನು ಗಳಿಸುವ ಮೂಲಕ ಭಜರಂಗ್ ಪೂನಿಯಾ 2-0 ಮುನ್ನಡೆ ಸಾಧಿಸಿದರು.
ಇನ್ನು ಎರಡನೇ ಸುತ್ತಿನಲ್ಲೂ ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿ ಮೂಡಿ ಬಂದಿತು. ಎರಡನೇ ಸುತ್ತಿನಲ್ಲಿ ಮತ್ತಷ್ಟು ಬಿಗಿಹಿಡಿತ ಸಾಧಿಸಿದ ಪೂನಿಯಾ ಮತ್ತೆ 4 ಅಂಕಗಳನ್ನು ಸಂಪಾದಿಸುವ ಮೂಲಕ 6-0 ಮುನ್ನಡೆ ಕಾಯ್ದುಕೊಂಡರು. ಕೊನೆಯ ನಿಮಿಷದಲ್ಲಿ ಮತ್ತೆರಡು ಅಂಕಗಳನ್ನು ಗಳಿಸುವ ಮೂಲಕ ಪೂನಿಯಾ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕ ಗೆದ್ದು ಬೀಗಿದರು.
ಈಗಾಗಲೇ ಭಾರತ ಪರ ಮೀರಾಬಾಯಿ ಚಾನು, ಪಿ.ವಿ. ಸಿಂಧು. ಲವ್ಲೀನಾ ಬೊರ್ಗೊಹೈನ್, ರವಿಕುಮಾರ್ ದಹಿಯಾ, ಭಾರತ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ.