* ಭಾರತಕ್ಕೆ ಮತ್ತೊಂದು ಪದಕ ಖಚಿತ ಪಡಿಸಿದ ಲೊವ್ಲಿನಾ ಬೊರ್ಗೊಹೈನ್* ಸೆಮಿಫೈನಲ್‌ ಪ್ರವೇಶಿಸಿದ ಕಂಚಿನ ಪದಕ ಖಚಿತಪಡಿಸಿದಕೊಂಡ ಬಾಕ್ಸರ್‌* ಭಾರತಕ್ಕೆ ಎರಡನೇ ಒಲಿಂಪಿಕ್ಸ್‌ ಪದಕ ಪಕ್ಕಾ ಮಾಡಿದ ಲೊವ್ಲಿನಾ

ಟೋಕಿಯೋ(ಜು.30): ಭಾರತದ ಪಾಲಿಗೆ ಇಂದು ಶುಭ ಶುಕ್ರವಾರ. ಮಹಿಳಾ ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಚೈನೀಸ್‌ ತೈಪೆಯ ಚೆನ್‌ ನೀನ್‌-ಚಿನ್‌ ವಿರುದ್ದ 4-1 ಅಂತರದಲ್ಲಿ ಜಯಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರ ಜತೆಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ. 

ಮಹಿಳಾ ವಾಲ್ಟರ್‌ವೇಟ್‌ ವಿಭಾಗದಲ್ಲಿ ಚೈನೀಸ್‌ ತೈಪೆಯ ಚೆನ್‌ ನೀನ್‌-ಚಿನ್‌ ಎದುರು ಪ್ರಾಬಲ್ಯ ಮೆರದ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದಾರೆ. ಲೊವ್ಲಿನಾ ಬೊರ್ಗೊಹೈನ್ ಇದೀಗ ಕಂಚಿನ ಪದಕ ಖಚಿತ ಪಡಿಸಿಕೊಂಡಿದ್ದು, ಸೆಮಿಫೈನಲ್‌ನಲ್ಲಿ ಗೆಲುವು ದಾಖಲಿಸಿದರೆ ಚಿನ್ನ ಅಥವಾ ಬೆಳ್ಳಿ ಪದಕಕ್ಕಾಗಿ ಫೈಪೋಟಿ ನಡೆಸಬಹುದಾಗಿದೆ. ಒಂದು ವೇಳೆ ಸೆಮೀಸ್‌ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಸೋತರೂ ಕಂಚಿನ ಪದಕ ಭಾರತೀಯ ಬಾಕ್ಸರ್ ಪಾಲಾಗಲಿದೆ.

Scroll to load tweet…

ಗುರುವಾರವಷ್ಟೇ ಲಂಡನ್ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಮೇರಿ ಕೋಮ್‌ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿದ್ದರು. ಆದರೆ ಇಂದು ಲೊವ್ಲಿನಾ ಬೊರ್ಗೊಹೈನ್ ಕಂಚಿನ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಕುಣಿದು ಕುಪ್ಪಳಿಸುವಂತೆ ಮಾಡಿದ್ದಾರೆ. 

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಈಗಾಗಲೇ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದ್ದಾರೆ. ಇದೀಗ ಲೊವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ ಪ್ರವೇಶಿಸುವ ಮೂಲಕ ಮತ್ತೊಂದು ಪದಕ ಭಾರತದ ಪಾಲಾದಂತೆ ಆಗಿದೆ.