* ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ತೆರಳಲು ಸಜ್ಜಾದ ಭಾರತ ತಂಡ* 10 ಪ್ಯಾರಾ ಅಥ್ಲೀಟ್‌ಗಳ ಜತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ* ಯಾವುದೇ ಒತ್ತಡವಿಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಎಂದು ಅಥ್ಲೀಟ್‌ಗಳಿಗೆ ಕಿವಿಮಾತು

ನವದೆಹಲಿ(ಆ.17): ಮುಂಬರುವ ಆಗಸ್ಟ್ 24ರಿಂದ ಆರಂಭವಾಗಲಿರುವ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಭಾರತ ಸಜ್ಜಾಗಿದೆ. ಭಾರತದ 10 ಪ್ಯಾರಾಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಇಂದು(ಆ.17) ವರ್ಚುವಲ್‌ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿ ನೀವೆಲ್ಲರೂ ಇಡೀ ದೇಶಕ್ಕೆ ರೋಲ್‌ ಮಾಡೆಲ್‌ಗಳು ಎಂದು ಮುಂಬರುವ ಕ್ರೀಡಾಕೂಟಕ್ಕೆ ಶುಭ ಹಾರೈಸಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತರಾದ ದೇವೇಂದ್ರ ಝಝಾರಿಯಾ, ಮರಿಯಪ್ಪನ್‌ ತಂಗವೇಲು ಸೇರಿದಂತೆ 10 ಪ್ಯಾರಾ ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಸಮಾಲೋಚನೆ ನಡೆಸಿದ್ದು, ಯಾವುದೇ ಒತ್ತಡವಿಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ. ನಿಮ್ಮ ಜೀವನದ ಎಲ್ಲಾ ನ್ಯೂನ್ಯತೆಗಳ ಹೊರತಾಗಿಯೂ, ನಂಬಿಕೆ ಕಳೆದುಕೊಳ್ಳದೇ ಛಲದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಕಠಿಣ ಪರಿಶ್ರಮ ಹಾಗೂ ದೃಢವಾದ ಸಂಕಲ್ಪದಿಂದ ಎಲ್ಲಾ ಅಡೆತಡೆಗಳನ್ನು ಮೆಟ್ಟಿನಿಂತು ನೀವು ಈ ಹಂತಕ್ಕೆ ತಲುಪಿದ್ದೀರ. ನೀವೆಲ್ಲ ಈಗ ಜಗತ್ತಿನ ಅತಿದೊಡ್ಡ ಕ್ರೀಡಾ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದೀರ ಎಂದು ಮೋದಿ ಹೇಳಿದ್ದಾರೆ.

Scroll to load tweet…

ನೀವೆಲ್ಲರೂ ನಿಜಕ್ಕೂ ಜಯಶಾಲಿಗಳು ಹಾಗೆಯೇ ರೋಲ್‌ ಮಾಡೆಲ್‌ಗಳು. ನೀವು ಯಾವುದೇ ಒತ್ತಡವಿಲ್ಲದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನವನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ನೀವೆಲ್ಲರೂ ತೋರಲಿದ್ದೀರ ಎನ್ನುವ ವಿಶ್ವಾಸವಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತಹ ಪ್ರದರ್ಶನ ತೋರಿದರೆ, ಪದಕಗಳು ನಿಮ್ಮನ್ನು ಹಿಂಬಾಲಿಸಲಿವೆ. ನೀವೆಲ್ಲರೂ ದೇಶವನ್ನು ಹೆಮ್ಮೆ ಪಡುವಂತೆ ಮಾಡಲಿದ್ದೀರ ಎನ್ನುವ ವಿಶ್ವಾಸದವಿದೆ ಎಂದು ಮೋದಿ ಹೇಳಿದ್ದಾರೆ.

ಆಗಸ್ಟ್ 17ರಂದು ಪ್ಯಾರಾಲಿಂಪಿಕ್ಸ್‌ ಕ್ರೀಡಾಳುಗಳ ಜತೆ ಪ್ರಧಾನಿ ಮೋದಿ ಸಂವಾದ

ಈ ಬಾರಿ ಹಿಂದೆಂದಿಗಿಂತಲೂ ಅತಿಹೆಚ್ಚು ಅಂದರೆ 54 ಪ್ಯಾರಾಲಿಂಪಿಯನ್‌ಗಳು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲೂ ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸವಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತ ಒಂದು ಚಿನ್ನ, ಎರಡು ಬೆಳ್ಳಿ ಸಹಿತ ಒಟ್ಟು 7 ಪದಕಗಳನ್ನು ಜಯಿಸಿತ್ತು.