ಟೋಕಿಯೋ ಪ್ಯಾರಾಲಿಂಪಿಕ್ಸ್ ಪದಕ ವಿಜೇತರನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ
* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ
* ಶನಿವಾರ ಭಾರತದ ಪಾಲಾದ 4 ಪದಕಗಳು
* ಪದಕ ವಿಜೇತರನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ
ಟೋಕಿಯೋ(ಸೆ.04): ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಶನಿವಾರ ಭಾರತದ ನಾಲ್ವರು ಪ್ಯಾರಾಥ್ಲೀಟ್‌ಗಳು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಪ್ಯಾರಾಲಿಥ್ಲಿಟ್ಸ್‌ಗಳು ಚಿನ್ನದ ಪದಕ ಜಯಿಸಿದರೆ, ಮತ್ತಿಬ್ಬರು ಬೆಳ್ಳಿ ಹಾಗೂ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಎಲ್ಲಾ ಸಾಧಕರಿಗೆ ಪ್ರಧಾನಿ ಮೋದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇದಷ್ಟೇ ಅಲ್ಲದೇ ಟ್ವಿಟರ್‌ನಲ್ಲಿ ಈ ಪದಕ ವಿಜೇತರ ಸಾಧನೆಯನ್ನು ಕೊಂಡಾಡಿದ್ದಾರೆ.
ಶೂಟಿಂಗ್‌ನ 50 ಮೀಟರ್ ರೈಫಲ್ಸ್ ಸ್ಪರ್ಧೆಯಲ್ಲಿ 19 ವರ್ಷದ ಮನೀಶ್ ನರ್ವಾಲ್ 218.2 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಇದೇ ಸ್ಪರ್ಧೆಯಲ್ಲಿ ಸಿಂಗ್‌ರಾಜ್ 216.7 ಅಂಕಗಳನ್ನು ಗಳಿಸುವ ಮೂಲಕ ಬೆಳ್ಳಿ ಪದಕ ಜಯಿಸಿದ್ದರು. ಇನ್ನು ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಪರಿಚಯಿಸಲಾಗಿದ್ದು, ಭಾರತ ಈಗಾಗಲೇ ಒಂದು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪ್ರಮೋದ್ ಭಗತ್ ಚಿನ್ನದ ಪದಕ ಜಯಿಸಿದರೆ, ಮನೋಜ್ ಸರ್ಕಾರ್ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ಯಾರಾಲಿಂಪಿಕ್ಸ್; ಭರ್ಜರಿ ಬೇಟೆ, ಶೂಟರ್ ಮನೀಶ್‌ಗೆ ಚಿನ್ನ, ಸಿಂಗ್‌ರಾಜ್‌ಗೆ ಬೆಳ್ಳಿ..!
ಮನೀಶ್ ನರ್ವಾಲ್ ಚಿನ್ನದ ಪದಕ ಗೆಲ್ಲುತ್ತಿದ್ದಂತೆಯೇ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ಯುವ ಪ್ರತಿಭಾನ್ವಿತ ಆಟಗಾರ ಚಿನ್ನದ ಪದಕ ಜಯಿಸಿರುವುದು ಭಾರತೀಯ ಕ್ರೀಡೆಯಲ್ಲಿ ವಿಶೇಷ ಕ್ಷಣ. ಪದಕ ಗೆದ್ದ ಮನೀಶ್ ನರ್ವಾಲ್‌ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲೇ ಎರಡನೇ ಪದಕ ಜಯಿಸಿದ ಸಿಂಗ್‌ರಾಜ್ ಅಧಾನಗೆ ಕೂಡಾ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಮ್ಮೆ ನೀವು ಅದ್ಭುತ ಪ್ರದರ್ಶನ ತೋರಿದ್ದೀರ. ನೀವು ಮತ್ತೊಂದು ಪದಕ ಜಯಿಸಿದ್ದೀರ. ಈ ಬಾರಿ 50 ಮೀಟರ್ ಮಿಶ್ರ ಪಿಸ್ತೂಲ್ ಸ್ಪರ್ಧೆಯಲ್ಲಿ. ನಿಮ್ಮ ಸಾಧನೆಯನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಅಭಿನಂದನೆಗಳು ನಿಮಗೆ ಎಂದು ಮೋದಿ ಶುಭ ಹಾರೈಸಿದ್ದಾರೆ.
ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಜಯಿಸಿದ ಪ್ರಮೋದ್ ಭಗತ್‌ಗೂ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಮೋದ್ ಭಗತ್ ಇಡೀ ದೇಶದ ಹೃದಯವನ್ನು ಗೆದ್ದಿದ್ದಾರೆ. ಅವರೊಬ್ಬ ಚಾಂಪಿಯನ್ ಆಟಗಾರ. ಅವರ ಈ ಸಾಧನೆ ಲಕ್ಷಾಂತರ ಮಂದಿಗೆ ಸ್ಪೂರ್ತಿಯಾಗಲಿದೆ. ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಜಯಿಸಿದ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಶುಭಕೋರಿದ್ದಾರೆ.
ಮನೋಜ್ ಸರ್ಕಾರ್ ಅದ್ಭುತ ಪ್ರದರ್ಶನ ನೋಡಿ ಖುಷಿಯಾಯಿತು. ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.