ಜರ್ಮನಿ ವಿರುದ್ಧ ಮುಗ್ಗರಿಸಿ ನಿರಾಸೆ ಅನುಭವಿಸಿದ ಭಾರತ ಹಾಕಿ, ಕಂಚಿನ ಪದಕ ಹೋರಾಟ ಬಾಕಿ!
ಜರ್ಮನಿ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇತಿಹಾಸ ರಚಿಸಲು ಸಜ್ಜಾಗಿದ್ದ ಭಾರತ ನಿರಾಸೆ ಅನುಭವಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿದೆ. ಇದೀಗ ಸ್ಪೇನ್ ವಿರುದ್ದ ಭಾರತ ಕಂಚಿನ ಪದಕ್ಕಾಗಿ ಹೋರಾಟ ನಡೆಸಲಿದೆ.
ಪ್ಯಾರಿಸ್(ಆ.06) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ರಚಿಸಲು ಭಾರತ ಸಜ್ಜಾಗಿತ್ತು. ಆದರೆ ಜರ್ಮನಿ ವಿರುದ್ಧದ ಸೆಮಿಫೈನಲ್ ಪಂದ್ಯ ಹಲವು ಸವಾಲುಗಳನ್ನು ಒಡ್ಡಿ ನಿರಾಸೆಗೊಳಿಸಿತು. ಮಹತ್ವದ ಪಂದ್ಯದಲ್ಲಿ ಭಾರತ 2-3 ಅಂತರದಲ್ಲಿ ಸೋಲು ಕಂಡಿತು. ಜರ್ಮನಿ ಫೈನಲ್ ಪ್ರವೇಶಿಸಿದರೆ, ಭಾರತ 44 ವರ್ಷಗಳ ಬಳಿಕ ಫೈನಲ್‌ಗೆ ಲಗ್ಗೆ ಇಡುವ ಕನಸು ನುಚ್ಚು ನೂರಾಯಿತು. ಇದೀಗ ಭಾರತ ಆಗಸ್ಟ್ 8 ರಂದು ಕಂಚಿನ ಪದಕ್ಕಾಗಿ ಸ್ಪೇನ್ ವಿರುದ್ದ ಹೋರಾಟ ನಡೆಸಲಿದೆ.
ಜರ್ಮನಿ ವಿರುದ್ಧಧ ಸೆಮಿಫೈನಲ್ ಪಂದ್ಯದ ಆರಂಭದಲ್ಲೇ ಭಾರತ ಮೇಲುಗೈ ಸಾಧಿಸಿತ್ತು. ಮೊದಲ ಕ್ವಾರ್ಟರ್ ಆರಂಭಗೊಂಡ ಬೆನ್ನಲ್ಲೇ ಭಾರತದ ಆಕ್ರಮಣಕಾರಿ ಆಟಕ್ಕೆ ಜರ್ಮನಿ ತಬ್ಬಿಬ್ಬಾಗಿತ್ತು. ಇದರ ಬೆನ್ನಲ್ಲೇ ಹರ್ಮನ್‌ಪ್ರೀತ್ ಸಿಂಗ್ ಸಿಡಿಸಿದ ಮೊದಲ ಗೋಲಿನಿಂದ ಭಾರತ 1-0 ಅಂತರದ ಮುನ್ನಡೆ ಸಾಧಿಸಿತು. ಮೊದಲ ಕ್ವಾರ್ಟರ್‌ನಲ್ಲಿ ದಿಟ್ಟ ಹೋರಾಟ ನೀಡಿದ ಮುನ್ನಡೆ ಕಾಯ್ದುಕೊಂಡಿತು.
ಎರಡನೇ ಕ್ವಾರ್ಟರ್‌ನಲ್ಲಿ ಜರ್ಮನಿ ಗೋಲು ಸಿಡಿಸುವ ಮೂಲಕ ಖಾತೆ ತೆರೆಯಿತು. ಇಷ್ಟೇ ಅಲ್ಲ 1-1 ಗೋಲುಗಳ ಅಂತರದಲ್ಲಿ ಸಮಬಲಗೊಳಿಸಿತು. ಇದು ಭಾರತದ ಮೇಲೆ ಒತ್ತಡ ಹೆಚ್ಚಿಸಿತು. ಇದರ ಬೆನ್ನಲ್ಲೇ ಜರ್ಮನಿ ಸಿಡಿಸಿದ ಮತ್ತೊಂದು ಗೋಲು 2-1 ಅಂತರದ ಮನ್ನಡೆ ಪಡೆದುಕೊಂಡಿತು. ಮೊದಲ ಕ್ವಾರ್ಟರ್‌ನಲ್ಲಿ ಮುನ್ನಡೆ ಸಾಧಿಸಿದ್ದ ಭಾರತ, 2ನೇ ಕ್ವಾರ್ಟರ್‌ನಲ್ಲಿ ತೀವ್ರ ಹಿನ್ನಡೆ ಅನುಭವಿಸಿತು.
ಮೂರನೇ ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಿದ ಭಾರತ ಮತ್ತೊಂದು ಗೋಲು ಸಿಡಿಸಿ 2-2 ಅಂತರದಲ್ಲಿ ಸಮಬಲ ಸಾಧಿಸಿತು. ಹರ್ಮನ್‌ಪ್ರೀತ್ ಹಾಗೂ ಸುಖ್ಜೀತ್ ಸಿಂಗ್ ನೆರವಿನಿಂದ ಭಾರತ ಸಿಡಿಸಿದ ಗೋಲು ಕೋಟ್ಯಾಂತರ ಭಾರತೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು.
ನಾಲ್ಕನೇ ಕ್ವಾರ್ಟರ್ ಮತ್ತಷ್ಟು ರೋಚಕಗೊಂಡಿತು. ಪಂದ್ಯ ಮುಕ್ತಾಯಕ್ಕೆ 6 ನಿಮಿಷ ಬಾಕಿ ಇರುವಾಗ ಜರ್ಮನಿ ಸಿಡಿಸಿದ ಗೋಲು ಪಂದ್ಯದ ಗತಿಯನ್ನೇ ಬದಲಿಸಿತು. ಜರ್ಮನಿ 3-2 ಅಂತರದ ಮುನ್ನಡೆ ಪಡೆಯಿತು. ಅಂತಿಮ ಹಂತದಲ್ಲಿ ಭಾರತದ ಫೌಲ್‌ನಿಂದ ಕೀಪರ್ ಕೂಡ ಹೊರಗುಳಿಯಬೇಕಾಯಿತು. ಕೊನೆಯ ಹಂತದಲ್ಲಿ ಭಾರತ ನಡೆಸಿದ ಪ್ರಯತ್ನ ವಿಫಲಗೊಂಡಿತು. 2-3 ಅಂತರದಿಂದ ಭಾರತ ಸೋಲು ಅನುಭವವಿಸಿತು