ಟೋಕಿಯೋ ಒಲಿಂಪಿಕ್ಸ್‌ಗೆ ಭಾರತದ ಜೆರ್ಸಿ ಅನಾವರಣ
* ಟೋಕಿಯೋ ಒಲಿಂಪಿಕ್ಸ್‌ಗೆ ಭಾರತೀಯ ಅಥ್ಲೀಟ್‌ಗಳ ಸಮವಸ್ತ್ರ ಅನಾವರಣ
* ಒಲಿಂಪಿಕ್ಸ್‌ಗೆ 50 ದಿನ ಬಾಕಿ ಇರುವಾಗಲೇ ಕ್ರೀಡಾಸಚಿವ ಕಿರಣ್ ರಿಜಿಜು ಅವರಿಂದ ಜೆರ್ಸಿ ಅನಾವರಣ
* ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭ
ನವದೆಹಲಿ(ಜೂ.04): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಕೇವಲ 50 ದಿನ ಬಾಕಿ ಇದ್ದು, ಗುರುವಾರ ಭಾರತೀಯ ಅಥ್ಲೀಟ್‌ಗಳ ಸಮವಸ್ತ್ರವನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅನಾವರಣಗೊಳಿಸಿತು. ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಲಿದೆ.
ಈ ವೇಳೆ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ‘ನಮ್ಮ ಅಥ್ಲೀಟ್‌ಗಳ ತಯಾರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದರು. 135 ಕೋಟಿ ಭಾರತೀಯರ ಹಾರೈಕೆ ನಮ್ಮ ಯುವ ಸ್ಪರ್ಧಾಳುಗಳ ಜತೆ ಇದೆ. ಇಡೀ ದೇಶದ ಜನರು ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ಅಥ್ಲೀಟ್‌ಗಳಿಗೆ ಮೋದಿ ಶುಭ ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಒಲಿಂಪಿಕ್ಸ್‌ಗೆ ಈಗಾಗಲೇ ಭಾರತದ 100 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಇನ್ನೂ 25ರಿಂದ 35 ಕ್ರೀಡಾಪಟುಗಳು ಅರ್ಹತೆ ಪಡೆಯುವ ನಿರೀಕ್ಷೆ ಇದ್ದು, ಒಟ್ಟಾರೆ ಕೋಚ್ ಹಾಗೂ ಅಧಿಕಾರಿಗಳು ಸೇರಿ ಒಲಿಂಪಿಕ್ಸ್‌ಗೆ 190 ಮಂದಿ ತೆರಳುವ ಸಾಧ್ಯತೆ ಇದೆ ಎಂದು ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ ತಿಳಿಸಿದರು.
ಟೋಕಿಯೋ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆಗಿಟ್ಟಿಸಿಕೊಂಡಿರುವ ಖ್ಯಾತ ಕುಸ್ತಿಪಟು ಭಜರಂಗ್ ಪೂನಿಯಾ, ರವಿ ಕುಮಾರ್ ದಹಿಯಾ, ಸುಮಿತ್ ಮಲಿಕ್, ಜಾವಲಿನ್ ಥ್ರೋ ಪಟು ನೀರಜ್ ಚೋಪ್ರಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.